ಕೋಲ್ಕತ್ತಾ:ವೆಸ್ಟ್ ಇಂಡೀಸ್ನ ದೈತ್ಯ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಟಿ-20 ಕ್ರಿಕೆಟ್ನ ಮೈಕಲ್ ಜೋರ್ಡಾನ್ ಇದ್ದಂತೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಸಿಇಒ ವೆಂಕಿ ಮೈಸೂರು ಅಭಿಪ್ರಾಯಪಟ್ಟಿದ್ದಾರೆ.
ಮೈಕಲ್ ಜೋರ್ಡಾನ್ ಬಾಸ್ಕೆಟ್ ಬಾಲ್ ಜಗತ್ತಿನ ಅದ್ಭುತ ಪ್ರತಿಭೆ. ಎನ್ಬಿಎನಲ್ಲಿ ಆರು ಬಾರಿ ಚಾಂಪಿಯನ್ ಆಗಿರುವ ಇವರು ಪ್ರಸ್ತುತ ವಿಶ್ವ ಕ್ರಿಕೆಟ್ನ ಶ್ರೀಮಂತ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರಾಗಿದ್ದಾರೆ. ಇವರು ಆಡುತ್ತಿದ್ದ ಕಾಲದಲ್ಲಿ ಇವರ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದರಿಂದ ವೆಂಕಿ ರಸೆಲ್ರನ್ನು ಜೋರ್ಡಾನ್ಗೆ ಹೋಲಿಸಿದ್ದಾರೆ.
ರಸೆಲ್ 2019ರ ಆವೃತ್ತಿಯಲ್ಲಿ 4 ಅರ್ಧಶತಕದ ಸಹಿತ 510 ರನ್ ಗಳಿಸಿದ್ದರು. ಇವರು 204.81 ಸ್ಟ್ರೈಕ್ ರೇಟ್ನಲ್ಲಿ ಅಬ್ಬರಿಸಿದ್ದರು. ಆದರೆ ತಂಡದ ಇತರೆ ಆಟಗಾರರ ಬೆಂಬಲದ ಕೊರತೆಯಿಂದ ಇವರ ತಂಡ ಪ್ಲೇ ಆಫ್ ತಲುಪುದರಲ್ಲಿ ವಿಫಲವಾಗಿತ್ತು. ಬ್ಯಾಟಿಂಗ್ ಹೊರತುಪಡಿಸಿ ರಸೆಲ್ ಬೌಲಿಂಗ್ನಲ್ಲೂ 11 ವಿಕೆಟ್ ಪಡೆದಿದ್ದರು. ಕೆಕೆಆರ್ ಲೀಗ್ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.
"ಆ್ಯಂಡ್ರೆ ರಸೆಲ್ ವಿಶ್ವದ ನಂಬರ್ ಒನ್ ಟಿ-20 ಆಟಗಾರನಾಗಿರುವುದು ನಮ್ಮ ಅದೃಷ್ಟ. ಅವರು ಬ್ಯಾಟ್ಸ್ಮನ್, ಬೌಲರ್, ಆಲ್ರೌಂಡರ್ ಎಂದು ನೀವು ಹೇಳಬಹುದು. ಆದರೆ ಅವರು ವಿಶ್ವದ ನಂಬರ್ ಒನ್ ಟಿ-20 ಆಟಗಾರ. ಅವರು ಟಿ-20 ಕ್ರಿಕೆಟ್ನ ಮೈಕಲ್ ಜೋರ್ಡಾನ್. ಇದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ" ಎಂದು ವೆಂಕಿ ಮೈಸೂರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ವೆಂಕಿ ಮೈಸೂರು ರಸೆಲ್ ಜೊತೆಗೆ ಮತ್ತೊಬ್ಬ ವಿಂಡೀಸ್ ಆಟಗಾರ ಸುನಿಲ್ ನರೈನ್ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನರೈನ್ ಕೂಡ ಒಬ್ಬ ಆಲ್ರೌಂಡರ್ ಇದ್ದಹಾಗೆ. ಕಳೆದ ಕೆಲವು ಋತುಗಳಿಂದ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಕೆಕೆಆರ್ ಈ ಬಾರಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಅವರನ್ನು ಖರೀದಿಸಿರುವುದು ಶಾರುಖ್ ಪಡೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ವೆಂಕಿ ಮೈಸೂರು ಹೇಳಿದ್ದಾರೆ.