ನವದೆಹಲಿ :ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದಲ್ಲಿ ಆರಂಭಿಕರಾಗಿ ಅನುಭವಿಗಳಾದ ಶಿಖರ್ ಧವನ್ ಮತ್ತು ರೋಹಿತ್ ಅವರನ್ನೇ ಕಣಕ್ಕಿಳಿಸಬೇಕು. ಇದು ಅತ್ಯುತ್ತಮ ಆಯ್ಕೆ ಎಂದು ಮಾಜಿ ಆಯ್ಕೆ ಸಮಿತಿ ಸದಸ್ಯ ಸರಂದೀಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಗೆದ್ದ ನಂತರ ಕೊಹ್ಲಿ ಈ ವರ್ಷ ಆರ್ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿಯುವುದಾಗಿ ತಿಳಿಸಿದ್ದರು. ಜೊತೆಗೆ ಮುಂಬರುವ ವಿಶ್ವಕಪ್ನಲ್ಲಿ ರೋಹಿತ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಕೂಡ ಇದೆ ಎಂಬ ಮಾತುಗಳು ಕೇಳಿ ಬಂದಿವೆ. ಧವನ್ ಸರಣಿಯ ಮೊದಲ ಪಂದ್ಯದ ವೈಫಲ್ಯದ ನಂತರ ಮುಂದಿನ 4 ಪಂದ್ಯಗಳಲ್ಲೂ ಅವರನ್ನು ಕಡೆಗಣಿಸಲಾಗಿತ್ತು.
2ನೇ ಪಂದ್ಯದಲ್ಲಿ ಇಶಾನ್ ಕಿಶನ್ ಕಣಕ್ಕಿಳಿದರೆ, ರೋಹಿತ್ ನಂತರದ 3 ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸಿದ್ದರು. ಸತತ 4 ಪಂದ್ಯಗಳ ವೈಫಲ್ಯದ ನಂತರ, ಕೊನೆಯ ಪಂದ್ಯದಲ್ಲಿ ರಾಹುಲ್ರನ್ನು ಹೊರಗಿಟ್ಟು ಸ್ವತಃ ಕೊಹ್ಲಿ ಆರಂಭಿಕನಾಗಿ ಆಡಿ 80 ರನ್ ಗಳಿಸಿದ್ದರು.
"ನಿಜಕ್ಕೂ ಆಶ್ಚರ್ಯವೆನಿಸುತ್ತಿದೆ(ಧವನ್ ಕಡಗಣನೆ), ಧವನ್ ಐಪಿಎಲ್ನಲ್ಲಿ ಉತ್ತಮವಾಗಿ ಆಡಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರು ಎಲ್ಲೆಲ್ಲಿ ಆಡಿದ್ದಾರೆ ಅಲ್ಲೆಲ್ಲಾ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದ್ದಾರೆ. ಬಹುಶಃ ಅವರು(ಮ್ಯಾನೇಜ್ಮೆಂಟ್) ಹೊಸ ಆಯ್ಕೆಯನ್ನು ಹುಡುಕುತ್ತಿದ್ದಾರೆ ಅನಿಸುತ್ತಿದೆ. ಆದರೆ, ನನ್ನ ಪ್ರಕಾರ ರೋಹಿತ್-ಧವನ್ರ ಲೆಫ್ಟ್ ಹ್ಯಾಂಡ್ -ರೈಟ್ ಹ್ಯಾಂಡ್ ಸಂಯೋಜನೆ ಭಾರತಕ್ಕೆ ಮುಂಬರುವ ವಿಶ್ವಕಪ್ಗೆ ಅತ್ಯುತ್ತಮ ಆಯ್ಕೆ" ಎಂದು ಸರಂದೀಪ್ ಸಿಂಗ್ ತಿಳಿಸಿದ್ದಾರೆ.
ನೀವು ಅವರ ಸಾಮರ್ಥ್ಯವನ್ನು ಕೇವಲ ಒಂದು ಪಂದ್ಯದ ವೈಫಲ್ಯದಿಂದ ಅಳೆಯುವುದಕ್ಕಾಗುವುದಿಲ್ಲ. ಅವರು ಏಕದಿನ ಸರಣಿಯಲ್ಲಿ ಉತ್ತವಾಗಿ ಆಡಿದ್ದಾರೆ. ಈ ಐಪಿಎಲ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಸುಲಭವಲ್ಲ. ಇಶಾನ್ ಕಿಶನ್ ತಂಡಕ್ಕೆ ಸೇರ್ಪಡೆಗೊಳ್ಳಬೇಕಾದರೆ ಮತ್ತಷ್ಟು ಅಸಾಧಾರಣ ಪ್ರದರ್ಶನ ನೀಡಬೇಕಿದೆ ಎಂದಿದ್ದಾರೆ.
ಕೆ. ಎಲ್. ರಾಹುಲ್ ಏಕದಿನ ಪಂದ್ಯಗಳಲ್ಲಿ ಮುಂದುವರಿಯಬೇಕು ಮತ್ತು ಶ್ರೇಯಸ್ ಅಯ್ಯರ್ ಹಿಂದಿರುಗಿದ ನಂತರ ರಿಷಭ್ ಪಂತ್ ಅವರ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ:ಐಪಿಎಲ್ನಲ್ಲಿ 'ಸಾಫ್ಟ್ ಸಿಗ್ನಲ್' ನಿಯಮ ರದ್ಧತಿಗೆ ನಿರ್ಧಾರ: ಗವಾಸ್ಕರ್ ಸಂತಸ