ಚತ್ತೋಗ್ರಾಮ್(ಬಾಂಗ್ಲಾದೇಶ):ನಾಯಕ ರಶೀದ್ ಖಾನ್ ಅವರ ಅಲ್ರೌಂಡ್ ಪ್ರದರ್ಶನದಿಂದ ಬಾಂಗ್ಲಾದೇಶದ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡ 224 ರನ್ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದ ಆಫ್ಘಾನಿಸ್ತಾನ ತಂಡ 117 ಓವರ್ಗಳಿಲ್ಲಿ 10 ವಿಕೆಟ್ ಕಳೆದುಕೊಂಡು 342 ರನ್ ಗಳಿಸಿತ್ತು. ಆಫ್ಘನ್ ಪರ ರಹ್ಮತ್ ಶಹ 102ರನ್, ಅಸ್ಗರ್ ಅಫ್ಘನ್ 92 ಮತ್ತು ನಾಯಕ ರಶಿದ್ ಖಾನ್ 51 ರನ್ಗಳಿಸಿ ಉತ್ತಮ ಕಾಣಿಕೆ ನೀಡಿದ್ದರು.
ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದ ಬಾಂಗ್ಲಾ ತಂಡ ಆಫ್ಘನ್ನರ ದಾಳಿಯನ್ನ ಎದುರಿಸಲಾಗದೇ 70.5 ಓವರ್ಗಳಲ್ಲಿ 205 ರನ್ಗಳಿಗೆ ಪತನ ಕಂಡಿತ್ತು. ಆಫ್ಘನ್ ಪರ ರಶೀದ್ ಖಾನ್ 5 ವಿಕೆಟ್ ಪಡೆದು ಮಿಂಚಿದ್ದರು.
ಇನ್ನು ಎರಡನೇ ಇನ್ನಿಂಗ್ಸ್ನಲ್ಲಿ ಆಫ್ಘನ್ ತಂಡ ಉತ್ತಮ ರನ್ ಕಲೆಹಾಕಿತ್ತು 90.1 ಓವರ್ಗಳಲ್ಲಿ 260 ರನ್ಗಳಿಗೆ ಸರ್ವಪತನ ಕಂಡು, ಬಾಂಗ್ಲಾ ತಂಡಕ್ಕೆ 397 ರನ್ಗಳ ಗೆಲುವಿನ ಗುರಿ ನೀಡಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು.
ಆಫ್ಘನ್ನರ ದಾಳಿಗೆ ತತ್ತರಿಸಿದ ಬಾಂಗ್ಲಾ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದ್ರು. ಕರಾರುವಕ್ಕಾದ ಬೌಲಿಂಗ್ ದಾಳಿ ನಡೆಸಿದ ರಶೀದ್ ಖಾನ್ ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಕಬಳಿಸಿದ್ರು. ಅಂತಿಮವಾಗಿ ಬಾಂಗ್ಲಾ ತಂಡ 61.4 ಓವರ್ಗಳಲ್ಲಿ 173 ರನ್ಗಳಿಗೆ ಸರ್ವಪತನ ಕಂಡು 224 ರನ್ಗಳಿಂದ ಆಫ್ಘನ್ ತಂಡಕ್ಕೆ ಶರಣಾಯಿತು.
ನಾಯಕತ್ವ ವಹಿಸಿಕೊಂಡ ಚೊಚ್ಚಲ ಪಂದ್ಯದಲ್ಲೇ 11 ವಿಕೆಟ್ ಕಬಳಿಸಿ, ಅರ್ಧ ಶತಕ ಸಿಡಿಸಿದ್ದ ರಶೀದ್ ಖಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.