ಮುಂಬೈ:ಭಾರತ ಟೆಸ್ಟ್ ತಂಡದಿಂದ ಕಳೆದ ಕೆಲವು ತಿಂಗಳಿಂದ ಹೊರಗುಳಿದಿದ್ದ ಕೆ ಎಲ್ ರಾಹುಲ್ ನ್ಯೂಜಿಲ್ಯಾಂಡ್ ವಿರುದ್ಧ ಮತ್ತೆ ತಂಡ ಸೇರಿಕೊಳ್ಳುವ ಸಾಧ್ಯತೆಯಿದೆ ಎಂಬ ನಿರೀಕ್ಷೆಯನ್ನು ಆಯ್ಕೆ ಸಮಿತಿ ಹುಸಿಗೊಳಿಸಿದೆ.
ವಿಂಡೀಸ್ ಪ್ರವಾಸದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ ನಂತರ ಟೆಸ್ಟ್ ತಂಡದಿಂದ ಹೊರಬಿದ್ದಿದ್ದ ರಾಹುಲ್ ನಂತರ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಮಾತ್ರ ಉಳಿದುಕೊಂಡಿದ್ದರು. ಆದ್ರೆ ಕಳೆದ 3 ತಿಂಗಳಲ್ಲಿ ಸೀಮಿತ ಓವರ್ಗಳಲ್ಲಿ ಪ್ರಚಂಡ ಫಾರ್ಮ್ನಲ್ಲಿದ್ದ ರಾಹುಲ್ ಟೆಸ್ಟ್ ತಂಡಕ್ಕೆ ವಾಪಸ್ ಸೇರ್ಪಡೆಗೊಳ್ಳುವ ನಿರೀಕ್ಷೆಯಲ್ಲಿದ್ದರು. ಆದ್ರೆ ಆಯ್ಕೆ ಸಮಿತಿ ಅವರ ಆಸೆಗೆ ತಣ್ಣೀರೆರಚಿದ್ದು ಯುವ ಬ್ಯಾಟ್ಸ್ಮನ್ಗಳಾದ ಪೃಥ್ವಿ ಶಾ ಹಾಗೂ ಶುಬ್ಮನ್ ಗಿಲ್ಗೆ ಅವಕಾಶ ನೀಡಿದೆ.
ಆರಂಭಿಕ ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ಹೊರಬೀಳುತ್ತಿದ್ದಂತೆ ರಾಹುಲ್ ಟೆಸ್ಟ್ ಕ್ರಿಕೆಟ್ಗೆ ಮರಳಬಹುದೆಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದರು. ಆದರೆ ಆಯ್ಕೆ ಸಮಿತಿ ಅವರನ್ನು ಸೀಮಿತ ಓವರ್ಗಳ ಆಟಕ್ಕೆ ಮೀಸಲಿಟ್ಟು ಯುವ ಆಟಗಾರರಿಗೆ ಮಣೆ ಹಾಕಿರುವುದಕ್ಕೆ ಕೆಲವು ಕ್ರಿಕೆಟ್ ತಜ್ಞರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ತಂಡಕ್ಕೆ ಮರಳುವ ಸಾಧ್ಯತೆ:
ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಗೆ ರಾಹುಲ್ ಅವಕಾಶ ಪಡೆಯುವಲ್ಲಿ ವಿಫಲರಾಗಿರುವುದರಿಂದ ಮತ್ತೆ ಕರ್ನಾಟಕ ರಣಜಿ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಕ್ವಾರ್ಟರ್ ಫೈನಲ್ ಸನಿಹದಲ್ಲಿರುವ ಕರ್ನಾಟಕ ತಂಡ ಬ್ಯಾಟಿಂಗ್ನಲ್ಲಿ ಕಳಪೆ ಪ್ರದರ್ಶನ ತೋರುತ್ತಿದೆ. ಇದೀಗ ರಾಹುಲ್ ಮತ್ತು ಮನೀಶ್ ಕಿವೀಸ್ ಏಕದಿನ ಸರಣಿ ಮುಗಿಸಿ ತವರಿಗೆ ವಾಪಸ್ ಬಂದ ನಂತರ ರಣಜಿ ಕ್ರಿಕೆಟ್ಗೆ ಮರಳುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.
ಈ ಹಿಂದಿನ ವಿಜಯ್ ಹಜಾರೆ, ಸಯ್ಯದ್ ಮುಸ್ತಾಕ್ ಅಲಿ ಟೂರ್ನಿಯ ವೇಳೆಯೂ ರಾಹುಲ್ ಹಾಗೂ ಮನೀಶ್ ಸೆಮಿಫೈನಲ್ ಹಾಗೂ ಫೈನಲ್ ವೇಳೆ ತಂಡಕ್ಕೆ ಸೇರ್ಪಡೆಗೊಂಡಿದ್ದರಿಂದಲೇ ಕರ್ನಾಟಕ ತಂಡ ಬ್ಯಾಕ್ ಟು ಬ್ಯಾಕ್ ಎರಡು ಟ್ರೋಫಿ ಎತ್ತಿ ಹಿಡಿದಿತ್ತು. ಸದ್ಯ ಕರ್ನಾಟಕ ತಂಡ 6 ಪಂದ್ಯಗಳಲ್ಲಿ 2 ಗೆಲುವು 4 ಡ್ರಾಗಳೊಂದಿಗೆ 24 ಅಂಕ ಸಂಪಾದಿಸಿ ಕ್ವಾರ್ಟರ್ ಫೈನಲ್ ಸನಿಹದಲ್ಲಿದೆ. ಲೀಗ್ನಲ್ಲಿ ಇನ್ನೆರಡು ಪಂದ್ಯಗಳಿದ್ದು, ಇದರಲ್ಲಿ ಒಂದು ಪಂದ್ಯ ಗೆದ್ದರೆ ಕ್ವಾರ್ಟರ್ ಫೈನಲ್ ಖಚಿತಗೊಳ್ಳಲಿದೆ.
ಟೆಸ್ಟ್ ಕ್ರಿಕೆಟ್ನಿಂದ ವೃತ್ತಿ ಜೀವನ ಆರಂಭಿಸಿರುವ ಕೆ ಎಲ್ ರಾಹುಲ್ ಭಾರತದ ಪರ 36 ಟೆಸ್ಟ್ ಪಂದ್ಯಗಳನ್ನಾಡಿದ್ದು, 5 ಶತಕದ ಸಹಿತ 2006 ರನ್ ಗಳಿಸಿದ್ದಾರೆ. ಅವರ 5 ಶತಕಗಳಲ್ಲಿ 3 ಶತಕ ವಿದೇಶದಲ್ಲಿ ಬಂದಿದ್ದರಿಂದ ಅವರು ಕಿವೀಸ್ ವಿರುದ್ಧ ಆಯ್ಕೆಯಾಗಲಿದ್ದಾರೆ ಎಂದು ಭಾವಿಸಲಾಗಿತ್ತು.