ಕರಾಚಿ :ಭಾರತದಲ್ಲಿ ನಡೆಯುವ 2021ರ ಟಿ-20 ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ವೀಸಾ ಪಡೆಯುವಲ್ಲಿ ನಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಐಸಿಸಿ ಲಿಖಿತ ಭರವಸೆ ನೀಡಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೇಳಿದೆ.
ಐಸಿಸಿಯ 2021 ಮತ್ತು 2023ರ ವಿಶ್ವಕಪ್ ಭಾರತದಲ್ಲಿ ಆಯೋಜಿಸುವ ಸಾಧ್ಯತೆಯಿದೆ. ಆದ್ದರಿಂದ ನಮ್ಮ ತಂಡಕ್ಕೆ ವೀಸಾ ಪಡೆಯಲು ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ಐಸಿಸಿ ಭರವಸೆ ನೀಡಬೇಕು ಎಂದು ಯೂಟ್ಯೂಬ್ ಕ್ರಿಕೆಟ್ ಚಾನೆಲ್ ಕ್ರಿಕೆಟ್ ಬಾಝ್ ನಡೆಸಿದ ಸಂದರ್ಶನದಲ್ಲಿ ಪಿಸಿಬಿ ಸಿಇಒ ವಾಸಿಂ ಖಾನ್ ಹೇಳಿದ್ದಾರೆ.
ಮುಂದಿನ ಕೆಲ ತಿಂಗಳ ಒಳಗಾಗಿ ಬಿಸಿಸಿಐ ಸರ್ಕಾರದಿಂದ ಈ ಬಗ್ಗೆ ಮಾಹಿತಿ ಪಡೆದು ಖಚಿತಪಡಿಸಲು ತಿಳಿಸುವಂತೆ ಐಸಿಸಿಗೆ ಪಿಸಿಬಿ ಹೇಳಿದೆ. ಮುಂದಿನ ಟಿ -20 ವಿಶ್ವಕಪ್ ಭಾರತ ಅಥವಾ ಆಸ್ಟ್ರೇಲಿಯಾದಲ್ಲಿ ನಡೆಯುವ ಬಗ್ಗೆ ಐಸಿಸಿ ಕಾರ್ಯನಿರ್ವಾಹಕ ಮಂಡಳಿ ಮುಂದಿನ ಸಭೆಯಲ್ಲಿ ಖಚಿತಪಡಿಸಲಿದೆ.
ಈ ವರ್ಷ ಆಸ್ಟ್ರೇಲಿಯಾದಲ್ಲಿ ವಿಶ್ವ ಟಿ- 20 ನಡೆಯುವ ಸಾಧ್ಯತೆ ಇಲ್ಲ. 2021 ರ ಟಿ-20 ವಿಶ್ವಕಪ್ನ ಆತಿಥೇಯ ಹಕ್ಕುಗಳನ್ನು ಈಗಾಗಲೇ ಭಾರತ ಹೊಂದಿದೆ ಎಂದು ವಾಸಿಂ ಖಾನ್ ತಿಳಿಸಿದ್ದಾರೆ. ಟಿ-20 ವಿಶ್ವಕಪ್ ಅಕ್ಟೋಬರ್ - ನವೆಂಬರ್ ಅವಧಿಯಲ್ಲಿ ನಡೆಸಬೇಕೆಂದು ಐಸಿಸಿ ಸದಸ್ಯರು ಅಭಿಪ್ರಾಯ ಪಟ್ಟಿರುವುದಾಗಿ ಖಾನ್ ಹೇಳಿದ್ದಾರೆ.