ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು, ಭಾರತ ತಂಡದ ಕೋಚ್ ರವಿಶಾಸ್ತ್ರಿ ಅಭಿನಂದಿಸಿದ್ದಾರೆ. ಅಲ್ಲದೇ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮನರಂಜನೆ ನೀಡುವಂತೆ ಕೇಳಿಕೊಂಡಿದ್ದಾರೆ.
ಶನಿವಾರ ಧೋನಿ ತಮ್ಮ ನಿವೃತ್ತಿಯನ್ನು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಧೋನಿ ಅವರು ವಿಡಿಯೋವನ್ನು ಹಂಚಿಕೊಂಡಿದ್ದರು. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು. 1929 ಗಂಟೆಯಿಂದ ನನ್ನನ್ನು ನಿವೃತ್ತ ಎಂದು ಪರಿಗಣಿಸಿ. ಔಪಚಾರಿಕ ಪ್ರಕಟಣೆಯ ಪೋಸ್ಟ್ ಅನ್ನು ಓದಿ ಎಂದು ಬರೆದುಕೊಂಡಿದ್ದರು.
ಧೋನಿ ನಿವೃತ್ತಿ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ, ಕ್ರೀಡೆಯ ನಿಜವಾದ ಬಾದ್‌ಷಾ ಎಂಎಸ್ ಬಗ್ಗೆ ನನಗೆ ಆಶ್ಚರ್ಯವಾಗುತ್ತದೆ. ಅವರ ಶಾಂತತೆ, ತೀವ್ರ ಒತ್ತಡ ಮತ್ತು ಟೀಕೆಗಳನ್ನು ನಿಭಾಯಿಸುವುದು ಅದ್ಬುತವೇ ಸರಿ . ಒಬ್ಬ ನಾಯಕನಾಗಿ ಧೋನಿ ಸಾಧನೆಗಳ ಶಿಖರವನ್ನೇರಿದ್ದಾರೆ. 2 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ವಿಶ್ವದ ನಂಬರ್ ಒನ್ ಟೆಸ್ಟ್ ತಂಡ, ಐಪಿಎಲ್ ಪ್ರಶಸ್ತಿಗಳು, ಚಾಂಪಿಯನ್ಸ್ ಲೀಗ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ ಎಂದು ಅವರು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.
ಅಲ್ಲದೆ ಐಪಿಎಲ್ ಸಮಯದಲ್ಲಿ ನಮ್ಮಗೆ ಮನರಂಜನೆ ನೀಡುವುದನ್ನು ಮುಂದುವರಿಸಿ. ಲೆಫ್ಟಿನೆಂಟ್ ಕರ್ನಲ್ ಎಂ.ಎಸ್ ಧೋನಿ ಅವರಿಗೆ ನಾನು ವಂದಿಸುತ್ತೇನೆ ಎಂದು ಬಿಸಿಸಿಐ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ರವಿಶಾಸ್ತ್ರಿ ಹೇಳಿದ್ದಾರೆ.