ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ತಂಡದ ಸೋಲಿನ ನಾಗಾಲೋಟ ಮುಂದುವರೆದಿದೆ. ನಿನ್ನೆ ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲೂ ಧೋನಿ ಪಡೆ ಸೋಲುವ ಮೂಲಕ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ.
ಈ ಹಿಂದಿನ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಸಲ ಸಂಪೂರ್ಣವಾಗಿ ಮುಗ್ಗರಿಸಿದ್ದು, ತಂಡದ ಕ್ಯಾಪ್ಟನ್ ಧೋನಿ ತೆಗೆದುಕೊಳ್ಳುತ್ತಿರುವ ಕೆಲವೊಂದು ನಿರ್ಧಾರಗಳು ತಂಡದ ಸೋಲಿಗೆ ಕಾರಣವಾಗುತ್ತಿದೆ ಎಂಬ ಮಾತು ಕೇಳಿ ಬಂದಿವೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 168ರನ್ಗಳ ಗುರಿ ಬೆನ್ನಟ್ಟಿದ ತಂಡ ಸುಲಭ ಗೆಲುವು ಸಾಧಿಸಬೇಕಾಗಿತ್ತು. ಆದರೆ ರವೀಂದ್ರ ಜಡೇಜಾ ಬದಲಿಗೆ ಕೇದಾರ್ ಜಾಧವ್ಗೆ ಬ್ಯಾಟಿಂಗ್ ಮಾಡಲು ಕಳುಹಿಸಿದ್ದರಿಂದ ತಂಡ ಸೋಲು ಕಂಡಿತ್ತು. ನಿನ್ನೆಯ ಪಂದ್ಯದಲ್ಲಿ ಬ್ರಾವೋ ಬದಲಿಗೆ ಕೊನೆ ಓವರ್ ಜಡೇಜಾಗೆ ನೀಡಿದ್ದು ತಂಡದ ಸೋಲಿಗೆ ಮುಖ್ಯ ಕಾರಣ ಎಂದು ಕೇಳಿ ಬಂದಿತ್ತು.
ಇದೇ ವಿಚಾರವಾಗಿ ಮಾತನಾಡಿರುವ ಧೋನಿ, ಬ್ರಾವೋ ಫಿಟ್ ಆಗಿರಲಿಲ್ಲ. ಗಾಯಗೊಂಡು ಮೈದಾನದಿಂದ ಹೊರ ನಡೆದಿದ್ದ ಅವರು ವಾಪಸ್ ಬರಲಿಲ್ಲ. ಹೀಗಾಗಿ ನಮ್ಮ ಬಳಿ ಕರ್ರನ್ ಹಾಗೂ ಜಡೇಜಾ ಆಯ್ಕೆ ಉಳಿದುಕೊಂಡಿತ್ತು. ಇದೇ ಕಾರಣಕ್ಕಾಗಿ ನಾವು ಜಡೇಜಾಗೆ ಅವಕಾಶ ನೀಡಿದ್ದೆವು ಎಂದಿದ್ದಾರೆ. ಸುದ್ದಿಗೋಷ್ಠಿ ವೇಳೆ ತಂಡದ ಕೋಚ್ ಸ್ಟಿಫನ್ ಫ್ಲೇಮಿಂಗ್ ಕೂಡ ಇದೇ ಮಾತು ಹೇಳಿದ್ದಾರೆ.
ಡೆಲ್ಲಿ ತಂಡಕ್ಕೆ ಕೊನೆಯ ಎರಡು ಓವರ್ಗಳಲ್ಲಿ 21ರನ್ಗಳ ಅವಶ್ಯಕತೆ ಇತ್ತು. 19ನೇ ಓವರ್ ಎಸೆದ ಕರನ್ ಕೇವಲ 4ರನ್ ನೀಡಿದ್ದರಿಂದ ಫೈನಲ್ ಓವರ್ನಲ್ಲಿ 17ರನ್ಗಳ ಅವಶ್ಯಕತೆ ಇತ್ತು. ಜಡೇಜಾ ಬೌಲಿಂಗ್ನಲ್ಲಿ ಅಕ್ಸರ್ ಪಟೇಲ್ ಮೂರು ಸಿಕ್ಸರ್ ಸಿಡಿಸಿ ತಂಡಕ್ಕೆ ಸುಲಭ ಗೆಲುವು ತಂದಿಟ್ಟರು.