ಕರ್ನಾಟಕ

karnataka

ETV Bharat / sports

ಡೆಲ್ಲಿ ತಂಡವನ್ನು 57 ರನ್​ಗಳಿಂದ ಮಣಿಸಿ 6ನೇ ಬಾರಿ ಫೈನಲ್ ಪ್ರವೇಶಿಸಿದ ಮುಂಬೈ - ಐಪಿಎಲ್ 2020 ಪ್ಲೇ ಆಫ್ ರೇಸ್

ಮುಂಬೈ ಇಂಡಿಯನ್ಸ್​ ನೀಡಿದ 201ರನ್​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 143 ರನ್​ಗಳಿಸಿ 57 ರನ್​ಗಳ ಸೋಲುಕಂಡಿತು.

6ನೇ ಬಾರಿ ಫೈನಲ್ ಪ್ರವೇಶಿಸಿದ ಮುಂಬೈ
6ನೇ ಬಾರಿ ಫೈನಲ್ ಪ್ರವೇಶಿಸಿದ ಮುಂಬೈ

By

Published : Nov 5, 2020, 11:45 PM IST

ದುಬೈ: ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಜಸ್ಪ್ರೀತ್ ಬುಮ್ರಾ ಹಾಗೂ ಟ್ರೆಂಟ್​ ಬೌಲ್ಟ್​ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು 57 ರನ್​ಗಳಿಂದ ಮಣಿಸಿ 6ನೇ ಬಾರಿಗೆ ಫೈನಲ್ ಪ್ರವೇಶಿಸಿದೆ.

ಮುಂಬೈ ಇಂಡಿಯನ್ಸ್​ ನೀಡಿದ 201ರನ್​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 143 ರನ್​ಗಳಿಸಿ 57 ರನ್​ಗಳ ಸೋಲುಕಂಡಿತು.

ಬೃಹತ್ ಮೊತ್ತ ಬೆನ್ನತ್ತಿದ ಡೆಲ್ಲಿ ತಂಡ ಖಾತೆ ತೆರೆಯುವ ಮುನ್ನವೇ 3 ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ , ರಹಾನೆಯನ್ನ ಬೌಲ್ಟ್​ ಪೆವಿಲಿಯನ್​ಗಟ್ಟಿದರೆ, ಶಿಖರ್ ಧವನ್​ರನ್ನ ಬುಮ್ರಾ ಬೌಲ್ಡ್​ ಮಾಡಿದರು. ​ನಂತರ ಬಂದ ಶ್ರೇಯಸ್ ಅಯ್ಯರ್​ 12 ರನ್​ಗಳಿಸಿ ಬುಮ್ರಾಗೆ 2ನೇ ಬಲಿಯಾದರೆ, ಪಂತ್ ತಮ್ಮ ಬ್ಯಾಟಿಂಗ್ ವೈಫಲ್ಯವನ್ನು ಮುಂದುವರಿಸಿ ಕೇವಲ 3 ರನ್​ಗಳಿಸಿ ಕೃನಾಲ್ ಪಾಂಡ್ಯಗೆ ವಿಕೆಟ್​ ಒಪ್ಪಿಸಿದರು.

ಒಂದು ಹಂತದಲ್ಲಿ 41ಕ್ಕೆ 5 ವಿಕೆಟ್​ ಕಳೆದುಕೊಂಡಿದ್ದ ಡೆಲ್ಲಿ ತಂಡ 100ರೊಳಗೆ ಕುಸಿಯುವ ಭೀತಿಗೆ ಒಳಗಾಗಿತ್ತು. ಆದರೆ ಸ್ಟೋಯ್ನಿಸ್​ 46 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 65 ರನ್​ ಹಾಗೂ ಅಕ್ಸರ್ ಪಟೇಲ್ 33 ಎಸೆತಗಳಲ್ಲಿ 2 ಬೌಂಡರಿ ,3 ಸಿಕ್ಸರ್​ಗಳ ಸಹಿತ 42 ರನ್​ಗಳಿಸಿ ತಂಡದ ಮೊತ್ತವನ್ನು 100 ಗಡಿ ದಾಟಿಸಿದರಲ್ಲದೆ ಸೋಲಿನ ಅಂತರವನ್ನು ತಗ್ಗಿಸಿದರು. ರಬಾಡ 15 ರನ್​ಗಳಿಸಿ ಔಟಾಗದೆ ಉಳಿದರು.

ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಯಾರ್ಕರ್ ಸ್ಪೆಷಲಿಸ್ಟ್​ ಬುಮ್ರಾ 4 ಓವರ್​ಗಳಲ್ಲಿ 14 ರನ್​ ನೀಡಿ 4 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್​ 2 ಓವರ್​ಗಳಲ್ಲಿ 9 ರನ್​ ನೀಡಿ 2 ವಿಕೆಟ್ ಪಡೆದರು. ಪಾಂಡ್ಯ ಮತ್ತು ಪೊಲಾರ್ಡ್​ ತಲಾ ಒಂದು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.

ಇದಕ್ಕು ಮುನ್ನ ಬ್ಯಾಟಿಂಗ್ ನಡೆಸಿದ್ದ ಮುಂಬೈ ತಂಡಕ್ಕೆ ಡಿಕಾಕ್​ 40, ಸೂರ್ಯಕುಮಾರ್ ಯಾದವ್​ 51, ಇಶಾನ್ ಕಿಶನ್ 55, ಹಾರ್ದಿಕ್ ಪಾಂಡ್ಯ 37 ರನ್​ಗಳಿಸಿ 200 ರನ್​ಗಳ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.

ಮುಂಬೈ ಈ ಪಂದ್ಯವನ್ನು ಗೆಲ್ಲುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿ 6ನೇ ಬಾರಿಗೆ ಫೈನಲ್ ಪ್ರವೇಶಿಸಿದರು. ಈ ಹಿಂದಿನ 5 ಫೈನಲ್​ಗಳಲ್ಲಿ 4 ಬಾರಿ ಪ್ರಶಸ್ತಿ ಎತ್ತಿ ಹಿಡಿದಿರುವ ಮುಂಬೈ 2010 ರಲ್ಲಿ ಚೆನ್ನೈ ವಿರುದ್ಧ ಸೋಲುಕಂಡು ರನ್ನರ್ ಅಪ್ ಆಗಿತ್ತು.

ABOUT THE AUTHOR

...view details