ಚೆನ್ನೈ: ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಇಸಿಬಿ ಇಂಗ್ಲೆಂಡ್ ತಂಡವನ್ನು ಪ್ರಕಟಿಸಿದೆ. ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಬೈರ್ಸ್ಟೋವ್, ಮಾರ್ಕ್ವುಡ್ ತಂಡಕ್ಕೆ ಮರಳಿದ್ದರೆ, ಆಲ್ರೌಂಡರ್ ಮೋಯಿನ್ ಅಲಿ ತಂಡದಿಂದ ಹೊರಗುಳಿದಿದ್ದಾರೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಬೈರ್ಸ್ಟೋವ್ ಭಾರತದೆದುರಿನ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ತಂಡದಲ್ಲಿ ಅವಕಾಶ ವಂಚಿತರಾಗಿದ್ದರು. ಇದೀಗ ಫೆ.24ರಿಂದ ಅಹ್ಮದಾಬಾದ್ನಲ್ಲಿ ನಡೆಯುವ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ಮತ್ತೆ ಮರಳಲಿದ್ದಾರೆ. ಇವರ ಜೊತೆಗೆ ವೇಗದ ಬೌಲರ್ ಮಾರ್ಕ್ವುಡ್ ಕೂಡ ಟೆಸ್ಟ್ ತಂಡ ಸೇರಿಕೊಂಡಿದ್ದಾರೆ.
ಆದರೆ ಆಲ್ ರೌಂಡರ್ ಮೋಯಿನ್ ಅಲಿ ಭಾರತ ವಿರುದ್ಧದ ಮುಂದಿನ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗಿರಲಿದ್ದಾರೆ. ಈಗಾಗಲೇ ಇಂಗ್ಲೆಂಡ್ ನಾಯಕ ಜೋ ರೂಟ್ ಈ ವಿಚಾರವನ್ನು ಮಂಗಳವಾರ ಖಾತರಿಪಡಿಸಿದ್ದಾರೆ. ಮಂಗಳವಾರ ಚೆನ್ನೈನಲ್ಲಿ ಮುಕ್ತಾಯಗೊಂಡ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ 317 ರನ್‌ಗಳ ಜಯ ಸಾಧಿಸಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-1ರ ಸಮಬಲ ಸಾಧಿಸಿದೆ.