ಲಾಹೋರ್:ಲೆಜೆಂಡರಿ ಪಾಕಿಸ್ತಾನದ ಬ್ಯಾಟ್ಸ್ಮನ್ ಜಾವೇದ್ ಮಿಯಾಂದಾದ್ ತಮ್ಮ ತಂಡದ ಸಹ ಆಟಗಾರನಾಗಿದ್ದ ಹಾಗೂ ದೇಶದ ಪ್ರಧಾನ ಮಂತ್ರಿಯಾಗಿರುವ ಇಮ್ರಾನ್ ಖಾನ್ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಬಗ್ಗೆ ಯಾವುದೇ ಜ್ಞಾನವಿಲ್ಲದ ವ್ಯಕ್ತಿಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಅಧಿಕಾರಿಗಳಾಗಿ ನೇಮಿಸುವ ಮೂಲಕ ಕ್ರಿಕೆಟ್ ವ್ಯವಹಾರವನ್ನು ಹಾಳು ಮಾಡಿದ್ದಾರೆ ಎಂದು ಮಿಯಾಂದಾದ್ ಕಿಡಿಕಾರಿದ್ದಾರೆ.
"ಪಿಸಿಬಿಯಲ್ಲಿರುವ ಅಧಿಕಾರಿಗಳಿಗೆ ಕ್ರಿಕೆಟ್ ಬಗ್ಗೆ ಎಬಿಸಿಡಿ ಗೊತ್ತಿಲ್ಲ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಾನು ಇಮ್ರಾನ್ ಖಾನ್ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡುತ್ತೇನೆ ಎಂದು ಮಿಯಾಂದಾದ್ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಪಿಸಿಬಿ ಸಿಇಒ ವಾಸಿಮ್ ಖಾನ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ "ನೀವು ಒಬ್ಬ ವ್ಯಕ್ತಿಯನ್ನು ವಿದೇಶದಿಂದ ಕರೆತಂದಿದ್ದೀರಿ, ವಿದೇಶಿಗರ ಮೇಲೆ ನೀವು ಹೆಚ್ಚು ಅವಲಂಬಿತರಾಗಿದ್ದೀರಿ. ಅವರ ಉದ್ದೇಶಗಳು ಕೆಟ್ಟದ್ದಾಗಿದೆ ಎಂಬುದು ನಿಮಗೆ ತಿಳಿದಿಲ್ಲ. ಅವರು ನಮ್ಮಿಂದ ಸಾಕಷ್ಟು ಕದಿಯುತ್ತಿದ್ದಾರೆ, ನೀವು ಅವರನ್ನು ಹೇಗೆ ಹಿಡಿಯುತ್ತೀರಿ?" ಎಂದು ಪ್ರಶ್ನಿಸಿದ್ದಾರೆ.
"ಪ್ರಸ್ತುತ ಆಡುತ್ತಿರುವ ಆಟಗಾರರು ಕ್ರಿಕೆಟ್‌ನಲ್ಲಿ ದೊಡ್ಡ ಭವಿಷ್ಯವನ್ನು ಹೊಂದಬೇಕು. ಭವಿಷ್ಯದಲ್ಲಿ ಈ ಆಟಗಾರರು ಕೊನೆಯಲ್ಲಿ ಕಾರ್ಮಿಕರಾಗಿ ಹೊರಹೋಗುವುದನ್ನು ನೋಡಲು ನಾನು ಬಯಸುವುದಿಲ್ಲ. ಅವರು(ಪಿಸಿಬಿ) ಕೈಬಿಟ್ಟ ನಂತರ ಆಟಗಾರರನ್ನು ನಿರುದ್ಯೋಗಿಗಳಾಗುತ್ತಿದ್ದಾರೆ. ಇದೀಗ ಅವರು ಸ್ವತಃ ಉದ್ಯೋಗವನ್ನು ಮಾಡಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೀವು ವಿದೇಶಿಗರನ್ನು ಪಾಕ್ ಕ್ರಿಕೆಟ್ ಮಂಡಳಿಗೆ ನೇಮಿಸಿದರೆ ಅವರು ಇಲ್ಲೇನಾದರೂ ದೊಡ್ಡ ಅವ್ಯವಹಾರ ಮಾಡಿ ವಿದೇಶಕ್ಕೆ ಹಾರಿದರೆ ಹೊಣೆ ಯಾರು ಎಂದು ಮಿಯಾಂದಾದ್ ಪ್ರಶ್ನಿಸಿದ್ದಾರೆ.
ಪಿಸಿಬಿ ಮುಖ್ಯಸ್ಥ ಎಹ್ಸಾನ್ ಮಣಿ ಮತ್ತು ವಸೀಮ್ ಖಾನ್ ಇಂಗ್ಲೆಂಡ್ ನಿವಾಸಿಗಳಾಗಿದ್ದು, ಅಲ್ಲಿನ ಕ್ರಿಕೆಟಿಗರಾಗಿದ್ದಾರೆ. ಅವರಿಬ್ಬರು ಇಮ್ರಾನ್ ಖಾನ್ ಆಪ್ತರಾಗಿರುವುದರಿಂದ ಅವರಿಗೆ ಉದ್ಯೋಗ ನೀಡಿರುವುದನ್ನು ಮಿಯಾಂದಾದ್ ಖಂಡಿಸಿದ್ದಾರೆ.