ಲಂಡನ್: ಪಾಕಿಸ್ತಾನ ವಿರುದ್ಧದ ಕೊನೆಯ ಟೆಸ್ಟ್ನಲ್ಲಿ 600 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಐಸಿಸಿ ಬಿಡುಗಡೆ ಮಾಡಿದ ನೂತನ ಟೆಸ್ಟ್ ಬೌಲಿಂಗ್ ಱಂಕಿಂಗ್ನಲ್ಲಿ ಟಾಪ್ 10ಗೆ ಮರಳಿದ್ದಾರೆ.
ಪಾಕಿಸ್ತಾನ ಸರಣಿಗೂ ಮೊದಲು ಟಾಪ್ 10ರಿಂದ ಹೊರಗಿದ್ದ ಆ್ಯಂಡರ್ಸನ್ ಕೊನೆಯ ಪಂದ್ಯದಲ್ಲಿ 7 ವಿಕೆಟ್ ಪಡೆಯುತ್ತಿದ್ದಂತೆ 6 ಸ್ಥಾನ ಏರಿಕೆ ಕಂಡಿದ್ದು 8ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಜೇಮ್ಸ್ ಆ್ಯಂಡರ್ಸನ್ 600 ವಿಕೆಟ್ಗಳ ದಾಖಲೆಯ ಜೊತೆಗೆ ಟೆಸ್ಟ್ ಕ್ರಿಕೆಟ್ನಲ್ಲಿ 29ನೇ ಬಾರಿ 5 ವಿಕೆಟ್ ಸಾಧನೆ ಮಾಡಿದ್ದರು.
ಇಂಗ್ಲೆಂಡ್ ಪರ 10ನೇ ಗರಿಷ್ಠ ರನ್ ದಾಖಲಿಸಿದ್ದ 22 ವರ್ಷದ ಜಾಕ್ ಕ್ರಾಲೆ(267) ಬರೋಬ್ಬರಿ 58 ಸ್ಥಾನಗಳ ಏರಿಕೆ ಕಂಡು ವೃತ್ತಿ ಜೀವನದ ಶ್ರೇಷ್ಠ 28ನೇ ಸ್ಥಾನಕ್ಕೇರಿದ್ದಾರೆ. ಈ ಸರಣಿಯಲ್ಲಿ 320 ರನ್ಗಳಿಸಿದ್ದರಿಂದ ಕ್ರಾಲೆ ಇಂಗ್ಲೆಂಡ್ನ 4ನೇ ಬೆಸ್ಟ್ ಱಂಕಿಂಗ್ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
152 ರನ್ ಗಳಿಸಿದ್ದ ಜೋಸ್ ಬಟ್ಲರ್ ಒಂದು ಸ್ಥಾನ ಏರಿಕೆ ಕಂಡು 22ರಿಂದ 21 ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಅಲ್ಲದೆ ಅವರು ವೃತ್ತಿ ಜೀವನದಲ್ಲೇ ಗರಿಷ್ಠ 637 ರೇಟಿಂಗ್ ಪಾಯಿಂಟ್ ಪಡೆದಿದ್ದಾರೆ.
ಕೊನೆಯ ಪಂದ್ಯದಲ್ಲಿ 141 ರನ್ ಗಳಿಸಿದ ಪಾಕಿಸ್ತಾನ ನಾಯಕ ಅಜರ್ ಅಲಿ 11 ಸ್ಥಾನ ಏರಿಕೆ ಕಂಡಿದ್ದು, 23ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.