ಹೈದರಾಬಾದ್: ಕೋವಿಡ್ 19 ಸಾಂಕ್ರಾಮಿಕದ ನಡುವೆಯೂ ಬಿಸಿಸಿಐ ಇಸಿಬಿ ಸಹಾಯದೊಂದಿಗೆ ಯುಎಇನಲ್ಲಿ ಟೂರ್ನಿಯನ್ನು ಆಯೋಜಿಸಿದೆ. ಬಯೋ ಬಬಲ್(ಜೀವ ಸುರಕ್ಷತಾ ವಲಯ) ರಚಿಸಿದ್ದು, ಇಲ್ಲಿ ಆಟಗಾರರಿಗೆ ಹಲವಾರು ನಿಬಂಧನೆಗಳನ್ನು ವಿಧಿಸಲಾಗಿದೆ.
ಒಂದು ವೇಳೆ ಆಟಗಾರರು ಅಥವಾ ಸಿಬ್ಬಂದಿ ಅಥವಾ ಕುಟುಂಬಸ್ಥರು ಈ ಬಯೋಬಬಲ್ ನಿಯಮಗಳನ್ನು ಮೀರಿದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಯಾವುದೇ ತಂಡ ಆಟಗಾರ ನಿಯಮ ಉಲ್ಲಂಘಿಸಿದರೆ, ಆತ ತಂಡದಿಂದ ಹೊರಹೋಗಿ 6 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಬೇಕಿದೆ ಎಂದು ಬಿಸಿಸಿಐ ಎಲ್ಲಾ ಫ್ರಾಂಚೈಸಿಗೂ ನೀಡಿರುವ ಅಧಿಸೂಚನೆಯಲ್ಲಿ ತಿಳಿಸಿದೆ.
ಎರಡನೇ ಬಾರಿ ನಿಯಮ ಉಲ್ಲಂಘನೆ ಮಾಡಿದರೆ ಒಂದು ಪಂದ್ಯ ನಿಷೇಧಕ್ಕೊಳಗಾಗಿಲಿದ್ದಾರೆ. ಮೂರನೇ ಬಾರಿ ಉಲ್ಲಂಘಿಸಿದರೆ ಟೂರ್ನಿಯಿಂದ ಹೊರ ಹಾಕಲಾಗುತ್ತದೆ. ಈತನಿಗೆ ಬದಲಿ ಆಟಗಾರನ ವ್ಯವಸ್ಥೆ ಆ ತಂಡಕ್ಕೆ ಇರುವುದಿಲ್ಲ.
ಆಟಗಾರರು ಪ್ರತಿ ದಿನದ ಆರೋಗ್ಯ ತಪಾಸಣೆ, ಜಿಪಿಎಸ್ ಟ್ರ್ಯಾಕರ್ ಅಳವಡಿಸಿಕೊಳ್ಳದೇ ಇದ್ದರೆ ಮತ್ತು ಕೋವಿಡ್-19 ಟೆಸ್ಟ್‌ಗೆ ಹಾಜರಾಗದಿದ್ದರೆ 3000 ಎಇಡಿ( 60 ಸಾವಿರ ರೂಪಾಯಿ) ದಂಡ ಹಾಕಲಾಗುತ್ತದೆ. ಇದು ಆಟಗಾರರ ಜೊತೆಗೆ ಅವರ ಕುಟುಂಬಸ್ಥರೂ ಹಾಗೂ ತಂಡದ ಅಧಿಕಾರಿಗಳಿಗೂ ಅನ್ವಯವಾಗುತ್ತದೆ.
ತಂಡದ ಎಲ್ಲ ಆಟಗಾರರು,ಮತ್ತು ಸಿಬ್ಬಂದಿ ಪ್ರತಿ ಐದು ದಿನಕ್ಕೊಮ್ಮೆ ಕೋವಿಡ್-19 ಟೆಸ್ಟ್‌ಗೆ ಒಳಗಾಗಬೇಕು. ಜೊತೆಗೆ ಬಯೋ ಬಬಲ್ ನಿಯಮ ಉಲ್ಲಂಘಿಸದಂತೆ ತಂಡದ ಅಧಿಕಾರಿಗಳು ಎಚ್ಚರಿವಹಿಸಬೇಕೆಂದು ಸೂಚಿಸಲಾಗಿದೆ.
ಬಯೋಬಬಲ್ನಲ್ಲಿ ಆಟಗಾರರು, ಸಹಾಯಕ ಸಿಬ್ಬಂದಿ ಜೊತೆಗೆ ಹೊರಗಿನ ಯಾವುದೇ ವ್ಯಕ್ತಿಯೊಂದಿಗೆ ಮಾತನಾಡಲು ಅನುವು ಮಾಡಿಕೊಡುವ ಮೂಲಕ ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ 1 ಕೋಟಿ ರೂಪಾಯಿ ದಂಡ ವಿಧಿಸಲಾಗುತ್ತದೆ. 2ನೇ ಬಾರಿ ಉಲ್ಲಂಘಿಸಿದರೆ ತಂಡದ ಅಂಕಗಳಲ್ಲಿ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ. 3ನೇ ಬಾರಿ ಉಲ್ಲಂಘಿಸಿದರೆ 2 ಅಂಕ ( ಒಂದು ಗೆಲುವಿಗೆ ಸಮ) ಕಡಿತಗೊಳಿಸಲಾಗುತ್ತದೆ.
ತಂಡದಲ್ಲಿ 12 ಕ್ಕಿಂತ ಕಡಿಮೆ ಆಟಗಾರರ ತಂಡವನ್ನು ಹೊಂದಿಸಲು ಸಾಧ್ಯವಾಗದಿದ್ದಾಗ ಆ ತಂಡದ ಪಂದ್ಯವನ್ನು ಮರು ಹೊಂದಿಸಲು ಬಿಸಿಸಿಐ ಪ್ರಯತ್ನಿಸುತ್ತದೆ. ಆದರೆ ಅದು ಸಾಧ್ಯವಾಗದಿದ್ದರೆ ಆ ತಂಡ ಪಂದ್ಯ ಸೋತಿದೆ ಎಂದು ಪರಿಗಣಿಸಲಾಗುತ್ತದೆ.
ಸಾಂಕ್ರಾಮಿಕ ರೋಗದ ಮಧ್ಯೆ ಈ ಟೂರ್ನಿ ನಡೆಯುತ್ತಿರುವುದರಿಂದ ಆರೋಗ್ಯ ಮತ್ತು ಸುರಕ್ಷತಾ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದಲ್ಲಿ ತಂಡಗಳು ಬಿಸಿಸಿಐ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ.