ಮುಂಬೈ:ವಾಂಖೆಡೆ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕಾಂಗಾರೂ ಪಡೆ ವಿಕೆಟ್ ನಷ್ಟವಿಲ್ಲದೇ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಮೂಲಕ ಗೆಲುವಿನ ಕನಸು ಕಾಣುತ್ತಿದ್ದ ಕೊಹ್ಲಿ ಪಡೆ ಹೀನಾಯ ಸೋಲು ಕಾಣುವ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲೇ ತೀವ್ರ ಮುಖಭಂಗ ಅನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ರೋಹಿತ್ ಶರ್ಮಾ (10)ರ ವಿಕೆಟನ್ನು ಬೇಗನೆ ಕಳೆದುಕೊಂಡಿತು. ನಂತರ ಕ್ರೀಸ್‌ಗೆ ಬಂದ ಶಿಖರ್ ಧವನ್(74) ಹಾಗೂ ಕೆ.ಎಲ್.ರಾಹುಲ್ ಶತಕದ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತು. ಆದರೆ 47 ರನ್ಗಳಿಸಿದ ರಾಹುಲ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ಬೇರೆ ಯಾವುದೇ ಆಟಗಾರ ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ತಂಡ 49.1 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 255 ರನ್ಗಳಿಸಿತು.
ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಆರಂಭದಿಂದಲೂ ಕೊಹ್ಲಿ ಪಡೆಯ ಬೌಲರ್ಗಳ ಮೇಲೆ ದಿಟ್ಟ ಸವಾರಿ ನಡೆಸಿತು. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ಕ್ಯಾಪ್ಟನ್ ಆ್ಯರೋನ್ ಫಿಂಚ್ ತಂಡಕ್ಕೆ ಭದ್ರ ಬುನಾದಿ ಹಾಕಿದರು.