ದುಬೈ:2016ರಿಂದಲೂ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದೀಗ ಎರಡು ಸ್ಥಾನ ಕಳೆದುಕೊಂಡಿದ್ದು, ಮೂರನೇ ಸ್ಥಾನಕ್ಕೆ ಕುಸಿತಗೊಂಡಿದೆ.
ಟೆಸ್ಟ್ ಹಾಗೂ ಟಿ-20 ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ನಂಬರ್ 1ಸ್ಥಾನಕ್ಕೆ ಲಗ್ಗೆ ಹಾಕಿದ್ದು, ಏಕದಿನ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. ಆದರೆ ಟೆಸ್ಟ್ ಚಾಂಪಿಯನ್ಶಿಪ್ ಟೂರ್ನಿಯ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
ಇದೀಗ ರಿಲೀಸ್ ಆಗಿರುವ ಅಂಕಗಳ ಪ್ರಕಾರ ಆಸ್ಟ್ರೇಲಿಯಾ 116 ಅಂಕ, ನ್ಯೂಜಿಲ್ಯಾಂಡ್ 115 ಅಂಕ ಹಾಗೂ ಭಾರತ 114 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಇಳಿಕೆಯಾಗಿದ್ದು, ಟಿ-20 ಶ್ರೇಯಾಂಕದಲ್ಲಿದ್ದ ಪಾಕ್ ಇದೇ ಮೊದಲ ಸಲ ತನ್ನ ಸ್ಥಾನ ಕಳೆದುಕೊಂಡಿದೆ. ಇಲ್ಲೂ ಕಾಂಗರೂ ಪಡೆ 278 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಲಗ್ಗೆ ಹಾಕಿದೆ.
ಟೆಸ್ಟ್ ಶ್ರೇಯಾಂಕದಲ್ಲಿ ಏರುಪೇರು ಕಾಣಲು ಕಾರಣ!?
ಐಸಿಸಿ ನಿಯಮಗಳ ಪ್ರಕಾರ 2016-17ರಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿತ್ತು. ಆ ದಾಖಲೆ ತೆಗೆದು ಹಾಕಿದ್ದರಿಂದ ಟೀಂ ಇಂಡಿಯಾ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ. ಹೀಗಾಗಿ 2016ರ ಬಳಿಕ ಆಸ್ಟ್ರೇಲಿಯಾ ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
2016-17ರಲ್ಲಿ ಟೀಂ ಇಂಡಿಯಾ ಆಡಿದ್ದ ಐದು ಟೆಸ್ಟ್ ಸರಣಿಗಳಲ್ಲಿ ಗೆಲುವು ದಾಖಲು ಮಾಡಿ, ಕೇವಲ ಒಂದು ಪಂದ್ಯದಲ್ಲಿ ಸೋಲು ಕಂಡಿತ್ತು. ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜಯ ದಾಖಲು ಮಾಡಿತ್ತು. ಆದರೆ 2019ರಲ್ಲಿ ಆಸ್ಟ್ರೇಲಿಯಾ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಅಗ್ರಸ್ಥಾನಕ್ಕೇರಿದೆ. 2003ರಿಂದ ಟೆಸ್ಟ್ನಲ್ಲೂ ಶ್ರೇಯಾಂಕ ನೀಡಲು ಐಸಿಸಿ ಆರಂಭಿಸಿದೆ. ಏಕದಿನದಲ್ಲಿ ವಿಶ್ವಕಪ್ ವಿಜೇತ ತಂಡ ಇಂಗ್ಲೆಂಡ್ ಮೊದಲ ಸ್ಥಾನ, ಭಾರತ ಎರಡನೇ ಸ್ಥಾನ ಹಾಗೂ ನ್ಯೂಜಿಲ್ಯಾಂಡ್ ಮೂರನೇ ಸ್ಥಾನದಲ್ಲಿದೆ.