ನವದೆಹಲಿ :ಭಾರತ ತಂಡದ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗಿಟ್ಟಿರುವುದಕ್ಕೆ ಆಯ್ಕೆ ಸಮಿತಿಯ ವಿರುದ್ಧ ಮಾಜಿ ನಾಯಕ ಮೈಕಲ್ ವಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈರ್ಸ್ಟೋವ್ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ವಾನ್ ಇಸಿಬಿ ಆಯ್ಕೆ ಸಮಿತಿ ವಿರುದ್ಧ ನೇರವಾಗಿ ಕಿಡಿಕಾರುತ್ತಿರುವುದು ಇದು ಎರಡನೇ ಬಾರಿ. ತಂಡ ಪ್ರಕಟಿಸಿದ ದಿನವೇ ವಾನ್ ಆಯ್ಕೆಗಾರರ ವಿರುದ್ಧ ಕಿಡಿಕಾರಿದ್ದರು.
" ಖಂಡಿತ ಬೈರ್ಸ್ಟೋವ್ ಭಾರತದ ವಿರುದ್ಧ ಟೆಸ್ಟ್ ಸರಣಿ ಆರಂಭದಿಂದಲೂ ತಂಡದ ಜೊತೆಯಿರಬೇಕಿತ್ತು. ಟೆಸ್ಟ್ ತಂಡಕ್ಕೆ ಈಗಷ್ಟೇ ಮರಳಿದಂತಹ ಹಾಗೂ ಸ್ಪಿನ್ ಬೌಲರ್ಗಳಿಗೆ ಉತ್ತಮ ಪ್ರದರ್ಶನ ತೋರಿದ ಆಟಗಾರನಿಗೆ ವಿಶ್ರಾಂತಿ ನೀಡಿರುವುದಕ್ಕೆ ಯಾವುದೇ ಅರ್ಥವಿಲ್ಲ" ಎಂದು ಟ್ವೀಟ್ ಮೂಲಕ ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ಪ್ರಸ್ತುತ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಆರಂಭಿಕರಾದ ಜ್ಯಾಕ್ ಕ್ರಾಲೆ ಮತ್ತು ಡಾಮ್ ಸಿಬ್ಲೆ ರನ್ಗಳಿಸಲು ಪರದಾಡುತ್ತಿದ್ದರೂ ಬೈರ್ಸ್ಟೋವ್ ಎರಡೂ ಟೆಸ್ಟ್ ಪಂದ್ಯಗಳಲ್ಲೂ ಗಮನಾರ್ಹ ಪ್ರದರ್ಶನ ತೋರಿಸಿದ್ದರು. ಹಾಗಾಗಿ, ಉಪಖಂಡದಲ್ಲಿ ನಡೆಯುವ ಸರಣಿಯಲ್ಲಿ ಅವರೂ ಇರಬೇಕಿತ್ತು ಎಂದು ಮಾಜಿ ನಾಯಕರಾದ ಮೈಕಲ್ ವಾನ್, ಹುಸೈನ್ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದರು.