ಸಿಡ್ನಿ: ಭೋಜನ ವಿರಾಮದ ನಂತರ ಆಸೀಸ್ ವೇಗಿಗಳ ದಾಳಿಗೆ ದಿಢೀರ್ ಕುಸಿತ ಕಂಡ ಭಾರತ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 244 ರನ್ಗಳಿಗೆ ಸರ್ವಪತನ ಕಂಡಿದ್ದು 94 ರನ್ಗಳ ಹಿನ್ನಡೆ ಅನುಭವಿಸಿದೆ.
ಬಿಗಿ ಬೌಲಿಂಗ್ ನಡುವೆಯೂ ಉತ್ತಮವಾಗಿ ಬ್ಯಾಟ್ ಬೀಸಿದ ಶುಬ್ಮನ್ ಗಿಲ್, ಪೂಜಾರ ಅವರ ಅರ್ಧ ಶತಕ ಮತ್ತು ಪಂತ್, ಜಡೇಜಾ ಅವರ ನೆರವಿನಿಂದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 244 ರನ್ ಕಲೆಹಾಕಿದೆ.
ಭಾರತ ಎರಡನೇ ದಿನದಾಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿತ್ತು. ಇಂದು ಬ್ಯಾಟಿಂಗ್ ಆರಂಭಿಸಿದ ಪೂಜಾರ ಮತ್ತು ರಹಾನೆ ತಾಳ್ಮೆಯಿಂದ ಬ್ಯಾಟ್ ಬೀಸುತ್ತ, ನಿಧಾನವಾಗಿ ರನ್ ಕದಿಯುತ್ತಿದ್ದರು. ಆದರೆ ಕಳೆದ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಾಯಕ ಅಜಿಂಕ್ಯಾ ರಹಾನೆ 22 ರನ್ ಗಳಿಸಿ ಕಮ್ಮಿನ್ಸ್ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಹನುಮ ವಿಹಾರಿ ತಮ್ಮ ನೀರಸ ಪ್ರದರ್ಶನ ಮುಂದುವರೆಸಿದ್ದು, ರನ್ ಕದಿಯುವ ಯತ್ನದಲ್ಲಿ ವಿಫಲರಾಗಿ ಪೆವಿಲಿಯನ್ ಸೇರಿಕೊಂಡರು. 5ನೇ ವಿಕೆಟ್ಗೆ ಜೊತೆಯಾದ ಪೂಜಾರ ಮತ್ತು ಪಂತ್, ಟೀಂ ಇಂಡಿಯಾಕ್ಕೆ ಆಸರೆಯಾಗಿದ್ದಾರೆ. ಆಸೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸುತ್ತಿರುವ ಈ ಜೋಡಿ ಅರ್ಧಶತಕದ ಜೊತೆಯಾಟವಾಡಿತು.
ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಪಂತ್ (36) ಹೆಜಲ್ವುಡ್ಗೆ ವಿಕೆಟ್ ಒಪ್ಪಿಸಿದ್ರೆ. ಸರಣಿಯಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಪೂಜಾರ ಕಮ್ಮಿನ್ಸ್ ಎಸೆತದಲ್ಲಿ ಬೌಲ್ಡ್ ಆದ್ರು. ನಂತರ ಬಂದ ಜಡೇಜಾ (28) ಬೌಡರಿ, ಸಿಕ್ಸರ್ ಸಿಡಿಸಿ ಟೀಂ ಇಂಡಿಯಾದ ಸ್ಕೋರ್ ಹೆಚ್ಚಿಸಿದ್ರು, ಅಶ್ವಿನ್ 10 ರನ್ ಗಳಿಸಿದ್ದು ಬಿಟ್ಟರೆ ಬಾಲಂಗೋಚಿಗಳಾದ ಸೈನಿ (3), ಬುಮ್ರಾ (0) ಮತ್ತು ಸಿರಾಜ್ (6) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ರು.
ಅಂತಿಮವಾಗಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 244 ರನ್ ಗಳಿಸಿದ್ದು, 94 ರನ್ಗಳ ಹಿನ್ನಡೆ ಅನುಭವಿಸಿದೆ. ಆಸೀಸ್ ಪರ ಕಮ್ಮಿನ್ಸ್ 4, ಹೆಜಲ್ವುಡ್ 2 ಮತ್ತು ಸ್ಟಾರ್ಕ್ 1 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 338 ರನ್ಗಳಿಸಿ ಆಲ್ಔಟ್ ಆಗಿತ್ತು.