ಹೈದರಾಬಾದ್:ಕುಟುಂಬದಲ್ಲಿ ದುರಂತ ನಡೆದಿದ್ದರು ತಮ್ಮ ಗೌರವಾನ್ವಿತ ಫ್ರಾಂಚಸಿಗಳ ಪರವಾಗಿ ಕಣಕ್ಕಿಳಿದ ಮಂದೀಪ್ ಸಿಂಗ್ ಹಾಗೂ ನಿತೀಶ್ ರಾಣಾರನ್ನು ಲೆಜೆಂಡರಿ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಶ್ಲಾಘಿಸಿದ್ದಾರೆ.
ಶನಿವಾರ ಕೆಕೆಆರ್ ತಂಡ ನಿತೀಶ್ ರಾಣಾ ಅವರ ಮಾವ ಕ್ಯಾನ್ಸರ್ನಿಂದ ಮೃತಪಟ್ಟಿರುವ ವಿಷಯ ತಿಳಿದು ಡೆಲ್ಲಿ ವಿರುದ್ಧ ಕಣಕ್ಕಿಳಿದಿದ್ದರು. ಶುಕ್ರವಾರ ಮಂದೀಪ್ ಸಿಂಗ್ ಅವರ ತಂದೆ ಹರ್ದೇವ್ ಸಿಂಗ್ ನಿಧನರಾಗಿದ್ದರು. ಆದರೆ ತಂದೆ ಕ್ರಿಕೆಟ್ ಅನ್ನು ಹೆಚ್ಚು ಪ್ರೀತಿಸುತ್ತಿದ್ದರಿಂದ ಮಂದೀಪ್ ತವರಿಗೆ ಮರಳದೆ ಪಂಜಾಬ್ ತಂಡದ ಪರ ಆಡಲು ನಿರ್ಧರಿಸಿದ್ದರು.
" ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ತುಂಬಾ ನೋವಿರುತ್ತದೆ. ಅದರಲ್ಲೂ ಅವರಿಗೆ ಅಂತಿಮ ವಿದಾಯ ಹೇಳಲೂ ನಮ್ಮಿಂದ ಸಾಧ್ಯವಾಗದಿದ್ದರೆ ಹೃದಯವೇ ಛಿದ್ರವಾದಂತೆ ನೋವಾಗುತ್ತದೆ. ಮಂದೀಪ್ ಮತ್ತು ನಿತೀಶ್ ಕುಟುಂಬ ದುಃಖದಿಂದ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಇಂದು ಅವರು ಆಡಿದ್ದಕ್ಕಾಗಿ ಹ್ಯಾಟ್ಸ್ಆಫ್. ಚೆನ್ನಾಗಿ ಆಡಿದ್ದೀರಿ " ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.
ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಕೆಕೆಆರ್ 59 ರನ್ಗಳ ಅಂತರದಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 12 ರನ್ಗಳ ಅಂತರದಿಂದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿತು. ಕೆಕೆಆರ್ ಪರ ರಾಣಾ ಆಕರ್ಷಕ 81 ರನ್ಗಳಿಸಿ ಮಿಂಚಿದರು. ಈ ಆಟವನ್ನು ಅವರು ತಮ್ಮ ಮಾವನಿಗೆ ಅರ್ಪಿಸಿದರೆ, ಪಂಜಾಬ್ ತಂಡದ ಗೆಲುವನ್ನು ಮಂದೀಪ್ ತಮ್ಮ ತಂದೆ ಅರ್ಪಿಸಿದ್ದಾರೆ. ಜೊತೆಗೆ ಈ ಪಂದ್ಯದಲ್ಲಿ ತಂಡದ ಎಲ್ಲಾ ಆಟಗಾರರು ಕಪ್ಪುಪಟ್ಟಿ ಧರಿಸಿ ಆಡಿದ್ದರು.