ಚೆನ್ನೈ: ಈ ವರ್ಷದ ಆರಂಭದಲ್ಲಿ ಧೋನಿಯೊಂದಿಗೆ ಸಿಎಸ್ಕೆ ಕ್ಯಾಂಪ್ ಸೇರಿದ್ದ ಹಿರಿಯ ಸ್ಪಿನ್ನರ್ ಪಿಯೂಷ್ ಚಾವ್ಲಾ ಭಾರತ ತಂಡದ ಮಾಜಿ ನಾಯಕನನ್ನು ನೋಡಿದರೆ ಕ್ರಿಕೆಟ್ನಿಂದ ಹೆಚ್ಚು ಕಾಲ ದೂರ ಉಳಿದವರಂತೆ ಕಾಣುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
2019ರ ವಿಶ್ವಕಪ್ ಸೆಮಿಫೈನಲ್ ಬಳಿಕ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಆದರೆ 2020ರ ಐಪಿಎಲ್ನಲ್ಲಿ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದರಾದರೂ ಕೊರೊನಾ ಸಾಂಕ್ರಾಮಿಕದಿಂದ ಮುಂದೂಡಲ್ಪಟ್ಟಿದ್ದರಿಂದ ಅವರು ಕ್ರಿಕೆಟ್ಗೆ ಮರಳುವುದು ತಡವಾಗಿದೆ.
ಟೂರ್ನಿ ಪ್ರಾರಂಭವಾಗುವ ಮೊದಲು, ಸಿಎಸ್ಕೆ ಆಡಳಿತ ಮಂಡಳಿ ಮಾರ್ಚ್ ಆರಂಭದಲ್ಲಿ ಚೆಪಾಕ್ ಕ್ರೀಡಾಂಗಣದಲ್ಲಿ ತರಬೇತಿ ಶಿಬಿರವನ್ನು ನಡೆಸಿತ್ತು. ಅಲ್ಲಿ ಧೋನಿ ಕೂಡ ಹಾಜರಿದ್ದರು. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಸ್ಟ್ಯಾಂಡ್‌ಗಳು ಭರ್ತಿಯಾಗುತ್ತಿದ್ದವು. ಮತ್ತು ಧೋನಿ ಸಿಕ್ಸರ್‌ಗಳನ್ನು ಹೊಡೆಯುವ ವಿಡಿಯೋಗಳನ್ನು ಫ್ರಾಂಚೈಸಿ ನಿಯಮಿತವಾಗಿ ಟ್ವೀಟ್ ಮಾಡುತ್ತಿತ್ತು.
"ಪ್ರಾಮಾಣಿಕವಾಗಿ ಹೇಳುವುದಾದರೆ, ಇಷ್ಟೊಂದು ದೀರ್ಘ ವಿರಾಮದ ಬಳಿಕ ಕ್ರಿಕೆಟಿಗ ಪುನರಾಗಮನ ಮಾಡಿದರೆ ಅವನು ಸ್ವಲ್ಪ ತುಕ್ಕು ಹಿಡಿದ ಕಬ್ಬಿಣದಂತೆ ಕಾಣುತ್ತಾನೆ. ಜನರೂ ಕೂಡ ಹಾಗೆ ನೋಡುತ್ತಾರೆ. ಆದರೆ ಧೋನಿ ರಾಂಚಿಯಲ್ಲಿ ಏನಾದರೂ ಮಾಡುತ್ತಿದ್ದರೂ ಎಂದು ನನಗೆ ಖಾತ್ರಿಯಿದೆ. ಏಕೆಂದರೆ ಅವರು ನಿಜಕ್ಕೂ ಅಭ್ಯಾಸವಿಲ್ಲದವರಂತೆ ಕಾಣುತ್ತಿರಲಿಲ್ಲ. ಅವರು ಶಿಬಿರಕ್ಕೆ ಆಗಮಿಸಿ ಎದುರಿಸಿದ 5-6 ಎಸೆತಗಳಲ್ಲೇ ಬೌಂಡರಿ ಗಡಿ ದಾಟಿಸುತ್ತಿದ್ದರು ಎಂದು ಆಕಾಶ್ ಚೋಪ್ರಾ ಅವರ ಯೂಟ್ಯೂಬ್ ಚಾನಲ್ಗೆ ನೀಡಿದ ಸಂದರ್ಶನದಲ್ಲಿ ಚಾವ್ಲಾ ತಿಳಿಸಿದ್ದಾರೆ.
ಅವರು ದೀರ್ಘ ಕಾಲ ಬ್ಯಾಟಿಂಗ್ ಮಾಡುತ್ತಿದ್ದರು. ಸುರೇಶ್ ರೈನಾ, ಅಂಬಾಟಿ ರಾಯುಡು, ಮುರುಳಿ ವಿಜಯ್ ಇವರು ಕ್ಯಾಂಪ್ನಲ್ಲಿ ಸೀಮಿತ ಆಟಗಾರರಾಗಿದ್ದರು. ಇನ್ನು ಹಲವಾರು ಬೌಲರ್ಗಳಿರುತ್ತಿದ್ದರು. ಇವರು ಸುಮಾರು ಎರಡೂವರೆ ಗಂಟೆಗಳ ಕಾಲ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದರು. ಒಬ್ಬಬ್ಬರೂ ಸುಮಾರು 200 ರಿಂದ 250 ಎಸೆತಗಳನ್ನು ಎದುರಿಸುತ್ತಿದ್ದರು ಎಂದು ಚಾವ್ಲಾ ಹೇಳಿದ್ದಾರೆ.