ಮುಂಬೈ: ಕ್ರಿಕೆಟ್ ದೇವರೆಂದೇ ಖ್ಯಾತರಾದ ಸಚಿನ್ ತೆಂಡೂಲ್ಕರ್ ಸೋಮವಾರ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ರನ್ನು ತಾವೆದುರಿಸಿದ ಉತ್ತಮ ಬೌಲರ್ಗಳಲ್ಲಿ ಒಬ್ಬರು ಎಂದು ತಿಳಿಸಿದ್ದಾರೆ.
ವಿಶ್ವದ ವೇಗದ ಬೌಲರ್ಗಳಲ್ಲಿ ಒಬ್ಬರಾದ ಡೇಲ್ ಸ್ಟೈನ್ ಟಿ-20 ಹಾಗೂ ಏಕದಿನ ಕ್ರಿಕೆಟ್ನತ್ತ ಹೆಚ್ಚು ಗಮನ ನೀಡುವ ಸಲುವಾಗಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ದಕ್ಷಿಣ ಆಫ್ರಿಕಾದ ಪರ ಹೆಚ್ಚು ಟೆಸ್ಟ್ ವಿಕೆಟ್ ಪಡೆದಿರುವ ಸ್ಟೈನ್ಗೆ ಭಾರತದ ಲೆಜೆಂಡ್ ಸಚಿನ್ ಶುಭ ಕೋರಿದ್ದು, ಅವರ ಬೌಲಿಂಗ್ ಎದುರಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೇಮ್ಸ್ ಆ್ಯಂಡರ್ಸನ್ ನಂತರ ಉತ್ತಮವಾಗಿ ಸ್ವಿಂಗ್ ಮಾಡಬಲ್ಲ ಬೌಲರ್ ಸ್ಟೈನ್ ಒಬ್ಬರೇ. 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಸ್ಟೈನ್ ಸ್ವಿಂಗ್ ಮಾಡುವುದರಲ್ಲಿ ಹೆಚ್ಚು ಸ್ಥಿರತೆ ಹೊಂದಿದ್ದರು. ಅವರ ಬೌಲಿಂಗ್ ಎದುರಿಸುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಆತ ವೇಗದ ಬೌಲಿಂಗ್ನಲ್ಲಿ ಮಾಸ್ಟರ್ ಆಗಿದ್ದರು ಎಂದು ಸಚಿನ್ ತಿಳಿಸಿದ್ದಾರೆ.
2011 ರಲ್ಲಿ ನಡೆದಿದ್ದ ಕೇಪ್ಟೌನ್ ಟೆಸ್ಟ್ ಪಂದ್ಯದಲ್ಲಿ ಸತತ ಒಂದು ಗಂಟೆ ಸ್ಟೈನ್ ತಮಗೊಬ್ಬರಿಗೆ ಬೌಲಿಂಗ್ ಮಾಡಿದ್ದು, ಅವರ 24 ವರ್ಷಗಳ ಕ್ರಿಕೆಟ್ ಜೀವನದ ಅತ್ಯುತ್ತಮ ಸಮಯ ಎಂದು ಬಣ್ಣಿಸಿದ್ದಾರೆ. ಆ ಪಂದ್ಯದ ವೇಳೆ ಒಂದು ಗಂಟೆ ಸಮಯ ಸಚಿನ್ ಸ್ಟೈನ್ ಬೌಲಿಂಗ್ ಎದುರಿಸಿದ್ದರೆ, ಜೊತೆಗಾರ ಗಂಭೀರ್ ಮಾರ್ನ್ ಮಾರ್ಕೆಲ್ ಬೌಲಿಂಗ್ಗೆ ಮಾತ್ರ ಆಡಿದ್ದರಂತೆ. ಇಬ್ಬರೂ ಒಂದು ಬಾರಿಯೂ ಸ್ಟ್ರೈಕ್ ಬದಲಿಸಿಕೊಳ್ಳಲು ಸಾಧ್ಯವಾಗದಷ್ಟು ಕಠಿಣವಾಗಿ ಆ ಇಬ್ಬರು ಬೌಲಿಂಗ್ ನಡೆಸಿದ್ದರೆಂದು ಸಚಿನ್ ನೆನೆಪಿಸಿಕೊಂಡಿದ್ದಾರೆ.
ಸ್ಟೈನ್ ಜೊತೆಗಿನ ಹೋರಾಟದ ಪ್ರತಿಕ್ಷಣವನ್ನು ನಾನು ಸಂಭ್ರಮಿಸಿದ್ದೇನೆ. ಅವರ ಮುಂದಿನ ವೃತ್ತಿ ಜೀವನ ಸುಖಮಯವಾಗಿರಲಿ ಎಂದು ಸಚಿನ್ ಶುಭಕೋರಿದ್ದಾರೆ.