ದುಬೈ: ಅನುಭವಿ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್ ಅವರ ಪ್ರಚಂಡ ಬೌಲಿಂಗ್ ದಾಳಿಯ ನೆರವಿನಿಂದ ಡೆಲ್ಲಿ ತಂಡವನ್ನು ಕೇವಲ 110 ರನ್ಗಳಿಗೆ ಕಟ್ಟಿಹಾಕಿದ್ದ ಮುಂಬೈ ಸಾಧಾರಣ ಗುರಿಯನ್ನು ಕೇವಲ 1 ವಿಕೆಟ್ ಕಳೆದುಕೊಂಡು ಮುಟ್ಟುವ ಮೂಲಕ ಸುಲಭ ಜಯ ಸಾಧಿಸಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 110 ರನ್ಗಳಿಸಿತ್ತು. ಶ್ರೇಯಸ್ ಅಯ್ಯರ್ 25 ಮತ್ತು ಪಂತ್ 21 ರನ್ಗಳಿಸಿದ್ದರು.
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಬುಮ್ರಾ 4 ಓವರ್ಗಳಲ್ಲಿ 17 ರನ್ ನೀಡಿ 3 ವಿಕೆಟ್ ಬೌಲ್ಟ್ 21 ರನ್ ನೀಡಿ 3 ವಿಕೆಟ್ ಪಡೆದರೆ, ರಾಹುಲ್ ಚಹಾರ್ ಮತ್ತು ನಥನ್ ಕೌಲ್ಟರ್ ನೈಲ್ ತಲಾ ಒಂದು ವಿಕೆಟ್ ಪಡೆದರು.
111 ರನ್ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 14.2 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ತಲುಪಿತು. ಇಶಾನ್ ಕಿಶನ್ 47 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ಸ್ ಸಹಿತ 72 ರನ್ಗಳಿಸಿ ಅಜೇಯರಾಗಿ ಉಳಿದರು. ಡಿಕಾಕ್ 28 ಎಸೆತಳಲ್ಲಿ 26 ರನ್ಗಳಿಸಿದರೆ, ಸೂರ್ಯಕುಮಾರ್ ಯಾದವ್ 12 ರನ್ಗಳಿಸಿದರು.
ಈ ಗೆಲುವಿನೊಂದಿಗೆ ಮುಂಬೈ ಅಗ್ರಸ್ಥಾನ ಉಳಿಸಿಕೊಂಡರೆ, ಡೆಲ್ಲಿ 3ನೇ ಸ್ಥಾನದಲ್ಲಿದ್ದರೂ ರನ್ರೇಟ್ನಲ್ಲಿ ಫ್ಲಸ್ನಿಂದ ಮೈನಸ್ಗೆ ಹಿಂಬಡ್ತಿ ಪಡೆದಿದೆ. ಅಲ್ಲದೆ ಮುಂದಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.