ಬ್ರಿಸ್ಬೇನ್:ಪಾಕಿಸ್ತಾನ- ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರು ಇನ್ನಿಂಗ್ಸ್ ಹಾಗೂ 5 ರನ್ಗಳಿಂದ ಗೆದ್ದು ಬೀಗಿದ್ದಾರೆ.
ಪಾಕಿಸ್ತಾನದ ಮೊದಲ ಇನ್ನಿಂಗ್ಸ್(240) ಪ್ರತ್ಯುತ್ತರವಾಗಿ ಬ್ಯಾಟ್ ಮಾಡಿದ್ದ ಆಸೀಸ್ ತಂಡ 580 ರನ್ ಗಳಿಸಿ ಸರ್ವಪತನವಾಗಿತ್ತು. ಡೇವಿಡ್ ವಾರ್ನರ್(154) ಹಾಗೂ ಮಾರ್ನಸ್ ಲಂಬಸ್ಚಾಗ್ನೆ(185) ಕೊಡುಗೆಯಿಂದ ಆಸ್ಟ್ರೇಲಿಯಾ 340 ರನ್ಗಳ ಬೃಹತ್ ಮುನ್ನಡೆ ಪಡೆದಿತ್ತು.
340 ರನ್ಗಳ ಹಿನ್ನಡೆಯಿಂದ ಕೊನೆಯ ಇನ್ನಿಂಗ್ಸ್ ಆರಂಭಿಸಿದ್ದ ಪಾಕ್, ಉತ್ತಮವಾಗಿ ಬ್ಯಾಟ್ ಬೀಸಲು ವಿಫಲವಾಯಿತು. ಬಾಬರ್ ಅಜಮ್(104), ಮೊಹಮ್ಮದ್ ರಿಜ್ವಾನ್(95) ಹಾಗೂ ಯಾಸಿರ್ ಶಾ(42) ಗಳಿಸಿದ್ದುಬಿಟ್ಟರೆ ಉಳಿದವರಿಂದ ಉತ್ತಮ ರನ್ ಬರಲಿಲ್ಲ.
335 ರನ್ ಗಳಿಸುವ ವೇಳೆ ಪಾಕಿಸ್ತಾನ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಸೋಲಿನ ಮುಖಭಂಗ ಅನುಭವಿಸಿತು. ಆಸ್ಟ್ರೇಲಿಯಾ ಪರ ಜೋಶ್ ಹ್ಯಾಜಲ್ವುಡ್ 4 ಹಾಗೂ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಕಿತ್ತು ಮಿಂಚಿದರು.
ಆಸ್ಟ್ರೇಲಿಯಾ ಈ ಗೆಲುವಿನೊಂದಿಗೆ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಏರಿಕೆ ಕಂಡಿದೆ. 116 ಅಂಕಗಳೊಂದಿಗೆ ಆಸ್ಟ್ರೇಲಿಯಾ ದ್ವಿತೀಯ ಸ್ಥಾನಕ್ಕೆ ಜಿಗಿದಿದೆ. ಉಭಯ ತಂಡ ಸರಣಿಯ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನ.29ರಿಂದ ಅಡಿಲೇಡ್ನಲ್ಲಿ ಆರಂಭವಾಗಲಿದೆ.