ಕ್ಯಾನ್ಬೆರಾ: ಭಾರತ ತಂಡ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಮೂರನೇ ಹಾಗೂ ಅಂತಿಮ ಪಂದ್ಯ ನಾಳೆ ಕ್ಯಾನ್ಬೆರಾದಲ್ಲಿ ನಡೆಯಲಿದ್ದು, 20 ವರ್ಷಗಳ ನಂತರ ಸತತ ಎರಡು ವೈಟ್ವಾಶ್ ತಪ್ಪಿಸಿಕೊಳ್ಳುವ ಗುರಿಯನ್ನು ಕೊಹ್ಲಿ ತಂಡ ಹೊಂದಿದೆ.
ಜನವರಿಯಲ್ಲಿ ಭಾರತ ತಂಡ 0-3ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧವೂ ವೈಟ್ವಾಶ್ ಮುಖಭಂಗಕ್ಕೆ ಒಳಗಾಗಿತ್ತು. ಅದು ಕೊಹ್ಲಿ ನಾಯಕತ್ವದಲ್ಲಿ ಮೊದಲ ಹೀನಾಯ ಸೋಲಾಗಿತ್ತು. ಇದೀಗ ಆಸ್ಟ್ರೇಲಿಯಾ ವಿರುದ್ಧವೂ ಅದೇ ವೈಟ್ವಾಶ್ ಮುಖಭಂಗಕ್ಕೆ ತುತ್ತಾಗುವ ಭೀತಿಯಲ್ಲಿದೆ.
ಭಾರತ -ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯದ ವಿಶ್ಲೇಷಣೆ 20 ವರ್ಷಗಳ ನಂತರ ಆಸ್ಟ್ರೇಲಿಯಾ ವಿರುದ್ಧ ಕ್ಲೀನ್ ಸ್ವೀಪ್ ಆಗುವುದನ್ನು ತಡೆಯಲು ತಂಡ ಏನು ಮಾಡಬಹುದು ಎಂದು ಕೇಳಿದ್ದಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಐಯ್ಯರ್, "ನಾವು ಕೊನೆಯ ಪಂದ್ಯವನ್ನು ಗೆಲ್ಲಬೇಕೆಂಬ ದೃಢ ನಿಶ್ಚಯವನ್ನು ಹೊಂದಿದ್ದೇವೆ. ನಾವು ಕ್ಲೀನ್ ಸ್ವೀಪ್ ಆಗುವುದಿಲ್ಲ, ನೋಡೋಣ" ಎಂದಿದ್ದಾರೆ.
ಅಭ್ಯಾಸದ ವೇಳೆ ನಮ್ಮ ಬೌಲರ್ಗಳು ತುಂಬಾ ಸಕಾರಾತ್ಮಕ ಭಾವನೆಯಲ್ಲಿದ್ದಾರೆ. ಕೆಲವು ಬೌಲರ್ಗಳು ಕೆಲವು ಯೋಜನೆಗಳೊಂದಿಗೆ ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಎರಡು ಪಂದ್ಯಗಳಲ್ಲೂ ರನ್ಗಳ ಹೊಳೆ ಹರಿದಿದೆ. ಆಸ್ಟ್ರೇಲಿಯಾ ತಂಡ ಎರಡೂ ಪಂದ್ಯಗಳಲ್ಲೂ ಭಾರತೀಯ ಬೌಲರ್ಗಳನ್ನು ಬೆಚ್ಚಿಬೀಳಿಸಿದ್ದಾರೆ. ಟಿ-20 ಸರಣಿಗೂ ಮುನ್ನ ಈ ಪಂದ್ಯವನ್ನು ಗೆದ್ದು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಕೊನೆಯ ಅವಕಾಶ ಭಾರತ ತಂಡಕ್ಕಿದೆ.
ತಂಡ ಕಳೆದೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವುದರಲ್ಲಿ ಎಡವಿದೆ ಎಂಬುದನ್ನು ನಾಯಕ ಕೊಹ್ಲಿ ಒಪ್ಪಿಕೊಂಡಿದ್ದಾರೆ. ಕೊನೆಯ ಪಂದ್ಯದಲ್ಲಿ ತಮ್ಮ ಲೋಪದೋಷಗಳನ್ನು ಸರಿಪಡಿಸಿಕೊಂಡು ಮತ್ತೆ ಟ್ರ್ಯಾಕ್ಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ.
ನವದೀಪ್ ಸೈನಿಯಂತಹ ಯುವ ಬೌಲರ್ ಹಾಗೂ ಕೆಲವು ಆಟಗಾರರಿಗೆ ಇದು ಮೊದಲ ಆಸೀಸ್ ಪ್ರವಾಸವಾಗಿದೆ. ಆದ್ದರಿಂದ ಅಲ್ಲಿನ ಪಿಚ್ಗಳಿಗೆ ಹೊಂದಿಕೊಳ್ಳುವುದರಲ್ಲಿ ವಿಫಲವಾಗುತ್ತಿದ್ದಾರೆ. ಈ ಕಾರಣದಿಂದ ಸೈನಿ ಸಾಕಷ್ಟು ರನ್ ಬಿಟ್ಟುಕೊಡುತ್ತಿದ್ದಾರೆ. 2ನೇ ಪಂದ್ಯದಲ್ಲಿ ಇವರ ಓವರ್ ಕೋಟಾ ಮುಗಿಸುವ ಸಲುವಾಗಿ ಕೊಹ್ಲಿ ಫಿಟ್ ಇಲ್ಲದ ಹಾರ್ದಿಕ್ ಪಾಂಡ್ಯ ಹಾಗೂ ಮಯಾಂಕ್ ಅಗರ್ವಾಲ್ರ ಕೈಯಲ್ಲಿ ಬೌಲಿಂಗ್ ಮಾಡಿಸುವ ಅನಿವಾರ್ಯತೆ ಎದುರಿಸಿದ್ದರು. ಕೊನೆಯ ಪಂದ್ಯದಲ್ಲಿ ಯಾರ್ಕರ್ ಕಿಂಗ್ ಅಥವಾ ಶಾರ್ದುಲ್ ಠಾಕೂರ್ ಇಬ್ಬರಲ್ಲಿ ಒಬ್ಬರನ್ನು ಸೈನಿ ಜಾಗದಲ್ಲಿ ಆಡಿಸುವ ಸಾಧ್ಯತೆಯಿದೆ.
ಬುಮ್ರಾ ಮತ್ತು ಶಮಿ ಟೆಸ್ಟ್ ತಂಡದ ಪ್ರಮುಖ ಭಾಗವಾಗಿರುವುದರಿಂದ ಅವರಿಬ್ಬರಿಗೂ ವಿಶ್ರಾಂತಿ ನೀಡಿ, ಠಾಕೂರ್ ಮತ್ತು ನಟರಾಜನ್ ಇಬ್ಬರನ್ನು ಆಡಿಸುವ ಆಲೋಚನೆ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ.
ಇನ್ನು ಎರಡೂ ಪಂದ್ಯಗಳಲ್ಲಿ 62 ಎಸೆತಗಳಲ್ಲಿ ಶತಕ ಸಿಡಿಸಿರುವ ಸ್ಟಿವ್ ಸ್ಮಿತ್ ಹಾಗೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಗ್ಲೆನ್ ಮ್ಯಾಕ್ಸ್ವೆಲ್ಗೆ ಬೌಲಿಂಗ್ ಮಾಡುವುದು ಹೇಗೆ ಎಂಬುದು ಭಾರತೀಯ ಬೌಲರ್ಗಳಿಗೆ ತಿಳಿಯುತ್ತಿಲ್ಲ. ಇನ್ನು ಬೌಲರ್ಗಳ ಬದಲಾವಣೆಯಲ್ಲಿ ಆತುರ ತೋರುತ್ತಿದ್ದಾರೆ. ಬುಮ್ರಾರನ್ನು ಸರಿಯಾಗಿ ಬಳಿಸಿಕೊಳ್ಳುತ್ತಿಲ್ಲ ಎಂದು ಗೌತಮ್ ಗಂಭೀರ್, ನೆಹ್ರಾ, ನಾಯಕ ಕೊಹ್ಲಿಯನ್ನು ಟೀಕಿಸಿದ್ದರು. ಈ ಪಂದ್ಯದಲ್ಲಿ ಕೊಹ್ಲಿ ಇದರ ಕಡೆ ಜಾಗೃತಿ ವಹಿಸಬೇಕಿದೆ.
ಸ್ಪಿನ್ನರ್ ಚಹಾಲ್ ಭಾರತೀಯ ಬೌಲರ್ಗಳ ಪೈಕಿ ಹೆಚ್ಚಿನ ರನ್ ಬಿಟ್ಟುಕೊಟ್ಟ ಬೌಲರ್ ಆಗಿದ್ದಾರೆ. ಅವರು 19 ಓವರ್ಗಳಲ್ಲಿ 160 ರನ್ ಬಿಟ್ಟುಕೊಟ್ಟಿದ್ದು ಕೇವಲ ಒಂದು ವಿಕೆಟ್ ಪಡೆದಿದ್ದಾರೆ. ಜಡೇಜಾ ಉತ್ತಮ ಎಕಾನಮಿ ಕಾಪಾಡಿಕೊಂಡರೂ ಎರಡೂ ಪಂದ್ಯದಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಎರಡನೇ ಪಂದ್ಯದ ವೇಳೆ ಕೊಹ್ಲಿ, ರಾಹುಲ್ ಉತ್ತಮ ಟಚ್ ಕಂಡುಕೊಂಡಿದ್ದಾರೆ. ಎರಡು ಪಂದ್ಯಗಳಲ್ಲೂ ಟಾರ್ಗೆಟ್ 330-340 ಇದ್ದಿದ್ದರೆ ಭಾರತ ಯಶಸ್ವಿಯಾಗಿ ಬೆನ್ನಟ್ಟಲು ಸಾಧ್ಯವಾಗುತ್ತಿತ್ತು. ಕೊನೆಯ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಲಿದ್ದು, ವಾರ್ನರ್ ಅನುಪಸ್ಥಿತಿಯನ್ನು ಭಾರತ ತಂಡ ಸದುಪಯೋಗ ಪಡಿಸಿಕೊಳ್ಳಬೇಕಿದೆ.
ತಂಡಗಳು
ಭಾರತ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಶುಬ್ಮನ್ ಗಿಲ್, ಕೆ.ಎಲ್.ರಾಹುಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ಶ್ರೇಯಸ್ ಐಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಾಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದಮ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದುಲ್ ಠಾಕೂರ್, ಟಿ.ನಟರಾಜನ್.
ಆಸ್ಟ್ರೇಲಿಯಾ: ಅ್ಯರೋನ್ ಫಿಂಚ್ (ಕ್ಯಾಪ್ಟನ್), ಡಿ'ಆರ್ಸಿ ಶಾರ್ಟ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಗ್ಲೆನ್ ಮ್ಯಾಕ್ಸ್ ವೆಲ್, ಅಲೆಕ್ಸ್ ಕ್ಯಾರಿ (ವಾರ), ಮಿಚೆಲ್ ಸ್ಟಾರ್ಕ್, ಆಡಮ್ ಜಂಪಾ, ಜೋಶ್ ಹೇಜಲ್ವುಡ್, ಸೀನ್ ಅಬಾಟ್, ಆಷ್ಟನ್ ಅಗರ್, ಕ್ಯಾಮೆರಾನ್ ಗ್ರೀನ್, ಮೊಯಿಸಸ್ ಹೆನ್ರಿಕ್ಸ್, ಆಂಡ್ರ್ಯೂ ಟೈ, ಡೇನಿಯಲ್ ಸ್ಯಾಮ್ಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್).