ಸಿಡ್ನಿ:ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸದಾ ಹೊಸ ವಿಷಯ ಕಲಿಯಲು ಬಯಸುವ ಆಶ್ವಿನ್ ಮತ್ತು ಹೆಚ್ಚು ಸುಧಾರಿತ ಬ್ಯಾಟ್ಸಮನ್ ಆಗಿ ಮಾರ್ಪಡುತ್ತಿರುವ ಜಡೇಜಾ ಭಾರತ ಪರ ನಿಂತಿರುವುದು ನಮಗೆ ಹೆಚ್ಚಿನ ಬಲ ತಂದುಕೊಟ್ಟಿದೆ ಎಂದು ಟೀಮ್ ಇಂಡಿಯಾ ನಾಯಕ ರಹಾನೆ ತಿಳಿಸಿದ್ದಾರೆ.
ರವಿಚಂದ್ರನ್ ಅಶ್ವಿನ್ ಪ್ರಸ್ತುತ ಸರಣಿಯ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಇನ್ನು ಜಡೇಜಾ ಎರಡನೇ ಟೆಸ್ಟ್ನಲ್ಲಿ ಅರ್ಧಶತಕ ಸಿಡಿಸಿ ನಾಯಕ ರಹಾನೆ ಜೊತೆಗೆ ಶತಕದ ಜೊತೆಯಾಟ ನಡೆಸಿ ಭಾರತ 8 ವಿಕೆಟ್ಗಳ ಜಯ ಸಾಧಿಸಲು ನೆರವಾಗಿದ್ದರು.
ಅವರು (ಅಶ್ವಿನ್) ಯಾವಾಗಲು ಹೊಸ ವಿಷಯಗಳನ್ನು ಕಲಿಯಲು ಎದುರು ನೋಡುತ್ತಿರುತ್ತಾರೆ. ಅವರು ಹೊಸ ಕೌಶಲ್ಯಗಳನ್ನು ಹೊಂದಿದ್ದಾರೆ. ಆದರೂ ಹೊಸದನ್ನು ಕಲಿಯುವ ಅವರ ಉತ್ಸಾಹ ಅವರನ್ನು ಮತ್ತಷ್ಟು ಅತ್ಯುತ್ತಮರನ್ನಾಗಿ ಮಾಡಿದೆ. ಅವರು ಮುಂದಿನ ಎರಡು ಟೆಸ್ಟ್ಗಳಲ್ಲೂ ಇದೇ ಪ್ರದರ್ಶನವನ್ನು ಮುಂದುವರೆಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ರಹಾನೆ ಗುರುವಾರ ಮೂರನೇ ಟೆಸ್ಟ್ಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಅಶ್ವಿನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.