ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧ ಸೂಪರ್ ಓವರ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಎಬಿಡಿ ವಿಲಿಯರ್ಸ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆಯನ್ನು ವಿಂಡೀಸ್ ದೈತ್ಯ ಹಾಗೂ ಮಾಜಿ ಆರ್ಸಿಬಿ ಕ್ರಿಕೆಟಿಗ ಕ್ರಿಸ್ ಗೇಲ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಸೋಮವಾರ ಮುಂಬೈ ವಿರುದ್ದ ನಡೆದ ಪಂದ್ಯದಲ್ಲಿ ವಿಲಿಯರ್ಸ್, ಬುಮ್ರಾ ಸೇರಿದಂತೆ ಮುಂಬೈ ತಂಡದ ಸ್ಟಾರ್ ಬೌಲರ್ಗಳ ವಿರುದ್ದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಅವರು 24 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಿತ 55 ರನ್ಗಳಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾಗಿದ್ದರು. ಅಲ್ಲದೆ ಸೂಪರ್ ಓವರ್ನಲ್ಲಿ ಬೌಂಡರಿ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.