ನವದೆಹಲಿ: 2018ರಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿದ್ದ ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಸ್ಪೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಮತ್ತೊಮ್ಮೆ ತಂಡ ಸೇರಿಕೊಳ್ಳಲು ಬಯಸಿದ್ದರು ಎಂಬ ಮಾಹಿತಿ ಸಂಬಂಧಿಸಿದಂತೆ ಇದೀಗ ಉತ್ತರ ನೀಡಿದ್ದಾರೆ.
ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಮೊದಲ ಲೀಗ್ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು ಕಾಣುತ್ತಿದ್ದಂತೆ ಎಬಿಡಿ ತಂಡವನ್ನ ಸೇರಿಕೊಳ್ಳಲು ಮುಂದಾಗಿ, ಆಯ್ಕೆ ಸಮಿತಿ ಮುಂದೆ ಬೇಡಿಕೆ ಇಟ್ಟಿದ್ದರು ಎಂಬ ಸುದ್ದಿ ಹರಡಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಉತ್ತರಿಸಿರುವ ಎಬಿಡಿ, ನಾನು ವಿಶ್ವಕಪ್ ಸೇರಲು ಯಾವುದೇ ಬೇಡಿಕೆ ಮುಂದಿಟ್ಟಿರಲಿಲ್ಲ ಎಂದು ಸ್ಪಷ್ಟೀಕರಿಸಿದ್ದಾರೆ.
2018ರ ಮೇ ತಿಂಗಳಲ್ಲೇ ನಾನು ಅಂತಾರಾಷ್ಟ್ರೀಯ ವಿಶ್ವಕಪ್ಗೆ ನಿವೃತ್ತಿ ಘೋಷಣೆ ಮಾಡಿರುವೆ. ಅತಿಯಾದ ಕೆಲಸದ ಒತ್ತಡ ನಿರ್ಧಾರಕ್ಕೆ ಕಾರಣವಾಗಿದ್ದು, ಈ ಹಿಂದೆ ನಾನು ತಿಳಿಸಿರುವ ಹಾಗೇ ಪತ್ನಿ ಮಗುವಿನೊಂದಿಗೆ ಹೆಚ್ಚಿನ ಕಾಲ ಕಳೆಯಲು ನಾನು ನಿರ್ಧರಿಸಿರುವೆ. ಹಣದಾಸೆಗೆ ನಾನು ನಿವೃತ್ತಿ ಸಲ್ಲಿಕೆ ಮಾಡಿದ್ದೇನೆ ಎಂಬ ಆರೋಪ ಸಹ ಕೇಳಿ ಬಂದಿದ್ದು, ಇದು ಸುಳ್ಳು. ವಿವಿಧ ಕ್ರಿಕೆಟ್ ತಂಡಗಳಿಂದ ಆಫರ್ ಬಂದರೂ ನಾನು ರಿಜೆಕ್ಟ್ ಮಾಡಿದ್ದೇನೆ. ಫ್ಯಾಮಿಲಿ ಜತೆ ಇರುವ ಉದ್ದೇಶದಿಂದ ಕ್ರಿಕೆಟ್ ಆಡುವ ಸಮಯದಲ್ಲೂ ಬದಲಾವಣೆ ಮಾಡಿಕೊಂಡಿರುವೆ ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಕೋಚ್ ಒಟಿಸ್ ಗಿಬ್ ಮಾರ್ಗದರ್ಶನ ಹಾಗೂ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ತಂಡ ಮುಂದಕ್ಕೆ ಹೆಜ್ಜೆಯನ್ನಿಟ್ಟಿತ್ತು. ಓರ್ವ ಕ್ರಿಕೆಟಿಗನಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ ನಾನು ನೀಡಿರುವ ಸೇವೆ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.