ಸೇಂಟ್ ಜಾನ್ಸ್ (ಆಂಟಿಗುವಾ) :ಮುಂಬರುವ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) 2020 ಕ್ಕೆ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ ಅವರನ್ನ ಟ್ರಿನ್‌ಬಾಗೊ ನೈಟ್ ರೈಡರ್ಸ್ (ಟಿಕೆಆರ್) ತಂಡ ಆಯ್ಕೆ ಮಾಡಿದೆ.
ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ತಾಂಬೆ ಅವರನ್ನ ಟಿಕೆಆರ್ ತಂಡ 7,500 ಡಾಲರ್‌ಗೆ ಬಿಡ್ ಮಾಡಿದೆ ಎಂದು ವೆಬ್‌ಸೈಟ್ ಒಂದು ವರದಿ ಮಾಡಿದೆ.
2019 ರ ಐಪಿಎಲ್ ಹರಾಜಿನಲ್ಲಿ ತಾಂಬೆ ಅವರನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಯ್ಕೆ ಮಾಡಿತ್ತು. ಆದರೆ, ಟಿ 10 ಲೀಗ್‌ನಂತಹ ಅಪ್ರಚೋದಿತ ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ್ದಕ್ಕಾಗಿ ಬಿಸಿಸಿಐ ಅವರನ್ನು ಹೊರಗಟ್ಟಿತ್ತು. ಇದೀಗ ಸಿಪಿಎಲ್ ಪಂದ್ಯದಲ್ಲಿ ಟಿಕೆಆರ್ ತಂಡದ ಪರವಾಗಿ ಆಡಲು ಆಯ್ಕೆಯಾಗಿದ್ದು, ತಾಂಬೆ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್‌ಮನ್ ಅಸಾದ್ ಪಠಾಣ್ ಕೂಡ ಆಯ್ಕೆಯಾಗಿದ್ದಾರೆ.
ವರದಿಯ ಪ್ರಕಾರ, ಅಫ್ಘಾನಿಸ್ತಾನ ಆಲ್‌ರೌಂಡರ್ ಮೊಹಮ್ಮದ್ ನಬಿ, ನೇಪಾಳದ ಲೆಗ್‌ಸ್ಪಿನ್ನರ್ ಸಂದೀಪ್ ಲಮಿಚಾನೆ, ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಬೆನ್ ಡಂಕ್ ಕೂಡ 2020 ಕೆರಿಬಿಯನ್ ಪ್ರೀಮಿಯರ್ ಲೀಗ್ಗೆ ಆಯ್ಕೆಯಾಗಿದ್ದಾರೆ. ಈ ಮೂವರು ಆಟಗಾರರನ್ನು ತಲಾ 130,000 ಡಾಲರ್‌ಗೆ ಬಿಡ್ ಮಾಡಲಾಗಿದೆ.
ಆಗಸ್ಟ್ 18 ಮತ್ತು ಸೆಪ್ಟೆಂಬರ್ 10 ರ ನಡುವೆ ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಪ್ರೇಕ್ಷರಿಲ್ಲದೇ ಸಿಪಿಎಲ್ ಪಂದ್ಯಗಳು ನಡೆಯಲಿವೆ.