ಹೈದರಾಬಾದ್:ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ನಿತ್ಯ ಲಕ್ಷಾಂತರ ಕೋವಿಡ್ ಸೋಂಕಿತ ಪ್ರಕರಣ ದಾಖಲಾಗುತ್ತಿವೆ. ಇದರ ಮಧ್ಯೆ ಡೆಡ್ಲಿ ವೈರಸ್ ಮಾರ್ಗಸೂಚಿ ಮಾಡದೇ ಅನೇಕರು ತಮ್ಮಿಷ್ಟದಂತೆ ಓಡಾಡುತ್ತಿದ್ದಾರೆ.
ದಿನದಿಂದ ದಿನಕ್ಕೆ ರಕ್ಕಸ ಕೊರೊನಾ ನಾಗಾಲೋಟ ಮುಂದುವರೆದಿರುವ ಕಾರಣ ಟೀಂ ಇಂಡಿಯಾ ಪ್ಲೇಯರ್ ರವೀಂದ್ರ ಜಡೇಜಾ, ಶಿಖರ್ ಧವನ್ ಹಾಗೂ ಮಾಜಿ ಆಟಗಾರ ಸುರೇಶ್ ರೈನಾ ವಿಶೇಷ ಮನವಿ ಮಾಡಿದ್ದಾರೆ.
ಕೋವಿಡ್ ಮಾರ್ಗಸೂಚಿ ಪಾಲಿಸಿ ಎಂದ ಜಡ್ಡು- ರೈನಾ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದ ಆಟಗಾರರಾದ ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾ ಸಹ ಕೋವಿಡ್ ಮಾರ್ಗಸೂಚಿ ಪಾಲನೆಗೆ ಮನವಿ ಮಾಡಿದ್ದಾರೆ.
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಹಿಂದೆಂದಿಗಿಂತಲೂ ನಾವು ಹೆಚ್ಚು ಒಂದಾಗಬೇಕು. ದಯವಿಟ್ಟು ಮುಖಗವಸು ಧರಿಸಿ, ಸಾಮಾಜಿಕ ದೂರು ಕಾಪಾಡಿಕೊಳ್ಳಿ. ಸರ್ಕಾರದ ಮಾನದಂಡ ಅನುಸರಿಸೋಣ. ನಾಗರಿಕರಾದ ನಾವು ಜವಾಬ್ದಾರರಾಗಿರಬೇಕು. ಈ ಕಠಿಣ ಕಾಲದಲ್ಲಿ ನಿಶ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯರು, ದಾದಿಯರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಜಡೇಜಾ ಟ್ವೀಟ್ ಮಾಡಿದ್ದಾರೆ.
ಮನೆಯಲ್ಲೇ ಇದ್ದುಕೊಂಡು ಮುಂಚೂಣಿ ಕಾರ್ಯಕರ್ತರಿಗೆ ಕೆಲಸ ಮಾಡಲು ಸಹಾಯ ಮಾಡುವಂತೆ ರೈನಾ ವಿನಂತಿ ಮಾಡಿದ್ದು, ಭಾರತ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ. ವೈದ್ಯಕೀಯ ಮೂಲ ಸೌಕರ್ಯ ತೊಂದರೆ ಉಂಟಾಗಿದ್ದು, ಸಂಪನ್ಮೂಲಗಳು ಕ್ಷೀಣಿಸುತ್ತಿವೆ. ಮನೆಯಲ್ಲಿದ್ದುಕೊಂಡು ನಿಮ್ಮ ಕುಟುಂಬ ಮತ್ತು ರಾಷ್ಟ್ರವನ್ನ ಸುರಕ್ಷಿತವಾಗಿಡಲು ಸಹಾಯ ಮಾಡಿ ಎಂದಿದ್ದಾರೆ.
ಪ್ಲಾಸ್ಮಾ ದಾನಕ್ಕೆ ಶಿಖರ್ ಮನವಿ
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗಿಯಾಗಿರುವ ಡೆಲ್ಲಿ ಕ್ಯಾಪಿಟಲ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಪ್ಲಾಸ್ಮಾ ದಾನ ಮಾಡುವಂತೆ ಟ್ವೀಟರ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ದೇಶ ಮಹಾಮಾರಿ ಕೊರೊನಾ ವೈರಸ್ನಿಂದ ತತ್ತರಿಸಿ ಹೋಗಿದ್ದು, ಜನರು ತಮ್ಮ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ನೀವು ಮಹಾಮಾರಿ ಗೆದ್ದಿದ್ದರೆ ನಿಮ್ಮ ಪ್ಲಾಸ್ಮಾ ದಾನ ಮಾಡಿ ಇತರರ ಜೀವ ಉಳಿಸಿ ಎಂದಿದ್ದಾರೆ.