ದುಬೈ: ನ್ಯೂಜಿಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಡಿವೋನ್ ಕಾನ್ವೆ ಕೈಮುರಿತಕ್ಕೊಳಗಾಗಿದ್ದು, ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ನಿಂದ ಹೊರಬಿದ್ದಿದ್ದಾರೆ ಎಂದು ಟಿ20 ವಿಶ್ವಕಪ್ ವೆಬ್ ಸೈಟ್ ಖಚಿತಪಡಿಸಿದೆ.
ಬುಧವಾರ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ 38 ಎಸೆತಗಳಲ್ಲಿ 46 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕಾನ್ವೆ ಲಿವಿಂಗ್ಸ್ಟೋನ್ ಬೌಲಿಂಗ್ನಲ್ಲಿ ದೊಡ್ಡ ಎಸೆತಕ್ಕೆ ಮುಂದಾಗಿ ಸ್ಟಂಪ್ ಔಟ್ ಆಗಿದ್ದರು. ಔಟಾದ ಹತಾಶೆಯಲ್ಲಿ ತಮ್ಮ ಬ್ಯಾಟ್ಗೆ ಜೋರಾಗಿ ಗುದ್ದಿದ್ದರು. ಇದೀಗ ಈ ಒಂದು ಕ್ಷಣದ ಕೋಪವೇ ಅವರನ್ನು ವಿಶ್ವಕಪ್ ಕನಸಿನ ಫೈನಲ್ನಲ್ಲಿ ಆಡದಿರುವಂತೆ ಮಾಡಿದೆ.
ಗುರುವಾರ ಕಾನ್ವೆ ಅವರ ಕೈಯನ್ನು ಎಕ್ರೇ ಮಾಡಿಸಲಾಗಿದ್ದು, ಅದರಲ್ಲಿ ಬಲಗೈ ಕಿರು ಬೆರಳಿನ ಮೂಳೆ ಮುರಿದಿರುವುದು ಖಚಿತವಾಗಿದೆ. ಹಾಗಾಗಿ ಅವರು ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಿಂದ ಹೊರಬಿದ್ದಿದ್ದಾರೆ ಎಂದು ಟಿ20 ವಿಶ್ವಕಪ್ ತನ್ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಇನ್ನು ಈ ಕುರಿತು ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ ಮಾಹಿತಿ ನೀಡಿದ್ದು, ಈ ಹಂತದಲ್ಲಿ ತಂಡದಿಂದ ಹೊರ ಬೀಳುತ್ತಿರುವುದಕ್ಕೆ ಕಾನ್ವೆ ತೀವ್ರ ಆಘಾತಕ್ಕೀಡಾಗಿದ್ದಾರೆ. ಅವರು ಬ್ಲಾಕ್ಕ್ಯಾಪ್ಸ್ ಪರ ಆಡುವುದಕ್ಕೆ ತುಂಬಾ ಉತ್ಸುಕರಾಗಿದ್ದರು. ದುರಾದೃಷ್ಟವಶಾತ್ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಬ್ಯಾಟ್ಗೆ ಬಡಿದು ಗಾಯಗೊಂಡಿರುವ ಅವರು ಕಾನ್ವೆ ಫೈನಲ್ ಪಂದ್ಯದಿಂದ ಹೊರಗುಳಿಯಬೇಕಿದೆ. ತಮ್ಮಿಂದ ತಂಡ ಹಿನ್ನಡೆಗೆ ಒಳಗಾಗಿದೆ ಎಂದು ನೊಂದುಕೊಂಡಿದ್ದಾರೆ. ಅವರಿಗೆ 4ರಿಂದ 6 ವಾರಗಳ ವಿಶ್ರಾಂತಿ ಅಗತ್ಯವಿತ್ತು ಭಾರತದ ವಿರುದ್ಧದ ಸರಣಿಗೂ ಅಲಭ್ಯರಾಗಲಿದ್ದಾರೆ ಎಂದು ಬ್ಲ್ಯಾಕ್ಕ್ಯಾಪ್ಸ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಸ್ಟೆಡ್ ಹೇಳಿದ್ದಾರೆ.
ಆದರೆ ಸಮಯದ ಆಭಾವವಿರುವುದಿಂದ ಫೈನಲ್ ಮತ್ತು ಭಾರತದ ವಿರುದ್ಧ ಮುಂದಿನ ವಾರ ನಡೆಯಲಿರುವ ಟಿ20 ಸರಣಿಯಲ್ಲಿ ಅವರ ಬದಲಿಗೆ ಬೇರೆ ಆಟಗಾರನನ್ನು ಘೋಷಣೆ ಮಾಡುವುದಿಲ್ಲ. ಆದರೆ ಟೆಸ್ಟ್ ಸರಣಿಯ ವೇಳೆಗೆ ನಮ್ಮ ಆಯ್ಕೆಯ ಬಗ್ಗೆ ಯೋಚನೆ ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಅವರೂ ಪ್ರಸ್ತುತ ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ಮೌಲ್ಯಯುತ 46 ರನ್ ಸೇರಿದಂತೆ ಒಟ್ಟು 167 ರನ್ಗಳಿಸಿದ್ದರು.
ಇದನ್ನು ಓದಿ:ICC T20 World Cup: ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿ ಫೈನಲ್ಗೆ ಲಗ್ಗೆಯಿಟ್ಟ ಆಸ್ಟ್ರೇಲಿಯಾ