ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25ರ ಆ ವೃತ್ತಿಯ ಮೊದಲ ಸರಣಿಯನ್ನು ಭಾರತ ವೆಸ್ಟ್ ಇಂಡೀಸ್ ಜೊತೆಗೆ ಪ್ರಾರಂಭಿಸಲಿದೆ. ಈ ಪ್ರವಾಸಕ್ಕೆ ತಂಡದ ಆಯ್ಕೆಯಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಲಿದೆ ಎಂಬುದರ ಬಗ್ಗೆ ಭಾರಿ ಚರ್ಚೆಗಳಾದವು. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಬಗ್ಗೆಯೂ ಹೇಳಲಾಗಿತ್ತು. ಪ್ರಕಟಿಸಿದ ತಂಡದಲ್ಲಿ ಅನುಭವಿ ಚೇತೇಶ್ವರ ಪೂಜಾರ ಅವರಿಗೆ ಮಾತ್ರ ಅವಕಾಶ ಸಿಕ್ಕಿಲ್ಲ. ಮತ್ತೆ ಉಳಿದಂತೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಿದ ಎಲ್ಲಾ ಬ್ಯಾಟರ್ಗಳಿಗೂ ಅವಕಾಶ ನೀಡಲಾಗಿದೆ. ಅಲ್ಲದೇ ಚಾಂಪಿಯನ್ಶಿಪ್ನ ಮೀಸಲು ಆಟಗಾರರಾಗಿ ಆಯ್ಕೆ ಆಗಿದ್ದ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ಗೆ ತಂಡದಲ್ಲಿ ಸ್ಥಾನ ದೊರೆತಿದೆ.
ಆದರೆ ಹಿರಿಯ ಅನುಭವಿ ಆಟಗಾರ ಪುಜಾರ ಅವರಿಗೆ ಕೊಕ್ ನೀಡಲು ಕಾರಣ ಏನು ಎಂಬುದನ್ನು ಆಯ್ಕೆ ಸಮಿತಿ ತಿಳಿಸಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಉತ್ತಮ ಪ್ರದರ್ಶನ ನೀಡದಿರುವುದೇ ಅವರನ್ನು ತಂಡದಿಂದ ಹೊರಗಿಡಲು ಕಾರಣ ಆಗಿದೆಯಾ ಎಂಬ ಪ್ರಶ್ನೆಗಳೂ ಉದ್ಭವವಾಗುತ್ತಿವೆ. ಈ ಬಗ್ಗೆ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಸಹ ಪ್ರಶ್ನೆ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆ ಆಗದಿರುವ ಬಗ್ಗೆ ಚೇತೇಶ್ವರ ಪೂಜಾರ ಮೌನ ಮುರಿದಿದ್ದಾರೆ. ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಚ್ಚಾ ಮೈದಾನಲ್ಲಿ ಅಭ್ಯಾಸದಲ್ಲಿ ತೊಡಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಪೂಜಾರ ಅವರು ಕಠಿಣ ಪರಿಶ್ರಮವನ್ನು ಮುಂದುವರಿಸಲು ಸಿದ್ಧರಿರುವುದಾಗಿ ಸಂದೇಶ ನೀಡಿದ್ದಾರೆ. ಮತ್ತೆ ಕಠಿಣ ಅಭ್ಯಾಸದ ಮೂಲಕ ಫಾರ್ಮ್ಗೆ ಮರಳಿ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಮರಳಿ ಪಡೆಯಲು ತಾವು ಸಿದ್ಧರಿರುವುದಾಗಿ ಸೂಚಿಸಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದ ತಂಡದಿಂದ ಪೂಜಾರ ಅವರನ್ನು ಹೊರಗಿಟ್ಟ ನಂತರ ಅವರು ಸೂರ್ಯಕುಮಾರ್ ಯಾದವ್ ಜೊತೆಗೆ ವೆಸ್ಟ್ ಝೋನ್ ಟೀಮ್ನಲ್ಲಿ 2023 ರ ದುಲೀಪ್ ಟ್ರೋಫಿಗಾಗಿ ಆಡಲಿದ್ದಾರೆ. 35 ವರ್ಷದ ಅವರು ದುಲೀಪ್ ಟ್ರೋಫಿಗೆ ತಯಾರಿ ನಡೆಸುತ್ತಿರುವಾಗ ತಮ್ಮ ಬ್ಯಾಟಿಂಗ್ ಸೆಷನ್‌ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೂಜಾರ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ)ಗೂ ಮೊದಲು ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಆಡಿದ್ದರು. ಅವರು ತಮ್ಮ ಫಾರ್ಮ್ಗಾಗಿ ಮತ್ತೆ ಆಡಲಿದ್ದಾರೆ ಎನ್ನಲಾಗ್ತಿದೆ.