ಮುಂಬೈ (ಮಹಾರಾಷ್ಟ್ರ):ಭಾರತ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಚೇತನ್ ಶರ್ಮಾ ಅವರು ಇನ್ನೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಬಿಸಿಸಿಐ ಇನ್ನೊಂದು ಅವಕಾಶ ನೀಡಲು ಮುಂದಾಗಿದೆ. ಅವರು ಸಮಿತಿಯನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ವರ್ಷದ ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್ನಲ್ಲಿ ಭಾರತ ಕಳಪೆ ಸಾಧನೆ ಮಾಡಿದ ಬಳಿಕ ಆಯ್ಕೆ ಸಮಿತಿಯ ತಲೆದಂಡ ಮಾಡಲಾಗಿತ್ತು. ಸಮಿತಿಯನ್ನು ಬರ್ಖಾಸ್ತು ಮಾಡಿ ಹೊಸ ಸಮಿತಿ ರಚನೆಗೆ ಅರ್ಜಿ ಕರೆಯಲಾಗಿತ್ತು. ಇದಕ್ಕೂ ಮೊದಲು ಏಷ್ಯಾ ಕಪ್ ಫೈನಲ್ ತಲುಪುವಲ್ಲೂ ಭಾರತ ಕ್ರಿಕೆಟ್ ತಂಡ ವಿಫಲವಾಗಿತ್ತು. ಇತ್ತೀಚೆಗೆ ಮುಕ್ತಾಯವಾದ ಬಾಂಗ್ಲಾದೇಶ ಸರಣಿಯನ್ನು ಟೀಂ ಇಂಡಿಯಾ ಸೋತಿತ್ತು.
ಈ ಎಲ್ಲ ಹಿನ್ನಡೆಗಳ ಮಧ್ಯೆ ಸಮರ್ಥ ತಂಡದ ಆಯ್ಕೆಗೆ ಉತ್ತಮ ಆಯ್ಕೆ ಸಮಿತಿಯನ್ನು ರಚಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾರತದ ಮಾಜಿ ಕ್ರಿಕೆಟಿಗರಾದ ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಮತ್ತು ಸುಲಕ್ಷಣಾ ನಾಯಕ್ ಅವರಿದ್ದ ಕ್ರಿಕೆಟ್ ಸಲಹಾ ಸಮಿತಿಗೆ (ಸಿಎಸಿ) ಪೂರ್ಣ ಅಧಿಕಾರ ನೀಡಿದೆ.