ಕೋಲ್ಕತ್ತಾ (ಪಶ್ಚಿಮ ಬಂಗಾಳ): ಏಕದಿನ ಕ್ರಿಕೆಟ್ ವಿಶ್ವಕಪ್ನ ಪಂದ್ಯಾವಳಿಯ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆ ಆಗಲಿದೆ ಎಂದು ಇತ್ತೀಚೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಹೇಳಿದ್ದರು. ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ದಿನಾಂಕವನ್ನು ಬದಲಿಸುವಂತೆ ಕೇಳಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಐಸಿಸಿ ಮತ್ತು ಬಿಸಿಸಿ ಈಚೆಗೆ ಬಿಡುಗಡೆ ಮಾಡಿದ್ದ ವೇಳಾಪಟ್ಟಿಯಲ್ಲಿ ನವೆಂಬರ್ 12ರಂದು ಇಂಗ್ಲೆಂಡ್- ಪಾಕಿಸ್ತಾನದ ಪಂದ್ಯ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯವನ್ನು ನೆವೆಂಬರ್ 11ಕ್ಕೆ ಬದಲಿಸುವಂತೆ ಪ್ರಸ್ತಾಪ ಮುಂದಿಟ್ಟಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಪಾಕಿಸ್ತಾನ ಭಾಗವಹಿಸುವ ಕಾರಣ ಪಂದ್ಯಕ್ಕೆ ಹೆಚ್ಚಿನ ಭದ್ರತೆ ಬೇಕಿದೆ. 12ರಂದು ದೀಪಾವಳಿ ಹಬ್ಬ ಇರುವುದರಿಂದ ಭದ್ರತೆಯ ಕೊರತೆ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಸಿಎಬಿಗೆ ಮಾಹಿತಿ ನೀಡಿದ್ದು, ವೇಳಾಪಟ್ಟಿ ಬದಲಾವಣೆಗೆ ಮನವಿ ಮಾಡಿದೆ ಎನ್ನಲಾಗಿದೆ.
ಸಿಎಬಿ ಅಧಿಕಾರಿಗಳು ಗುರುವಾರ ನಗರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಬ್ಬದ ದಿನ ಕಾನೂನು, ಸುವ್ಯವಸ್ಥೆ ಕಾಪಾಡುವದು ಕಷ್ಟ ಎಂದು ಹೇಳಿದ್ದು, ಸಿಎಬಿಯು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಪತ್ರ ಬರೆದು ದಿನಾಂಕ ಬದಲಿಸುವಂತೆ ಮನವಿ ಮಾಡಿದೆ.
ಭಾರತ-ಪಾಕ್ ಪಂದ್ಯದ ದಿನಾಂಕವೂ ಬದಲು? : ಈಗಾಗಲೇ ಬಿಡುಗಡೆಯಾದ ವೇಳಾಪಟ್ಟಿಯಂತೆ ಗುಜರಾತ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಅಕ್ಟೋಬರ್ 15ರಂದು ನಡೆಯಲಿದೆ. ಆದರೆ ಉತ್ತರ ಭಾರತದಲ್ಲಿ ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುವ ನವರಾತ್ರಿ ಹಬ್ಬ ಇದೇ ದಿನದಿಂದ ಪ್ರಾರಂಭವಾಗುವುದರಿಂದ ಪೊಲೀಸರು ದಿನಾಂಕ ಬದಲಾವಣೆಗೆ ಕೋರಿದ್ದಾರೆ ಎನ್ನಲಾಗಿದೆ. ಅದರಂತೆ, ಪಂದ್ಯ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 14ರಂದು ನಡೆಯುವ ಸಾಧ್ಯತೆ ಗೋಚರಿಸಿದೆ.
ಕೆಲವು ದೇಶಗಳ ಕ್ರಿಕೆಟ್ ಮಂಡಳಿಗಳು ಪಂದ್ಯಗಳ ನಡುವೆ ಪ್ರಯಾಣಕ್ಕೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದ್ದವು. ಒತ್ತೊತ್ತಾಗಿ ಪಂದ್ಯಗಳಿರುವುದರಿಂದ ಅಭ್ಯಾಸಕ್ಕೆ ಸಮಯ ಕಡಿಮೆ ಇದೆ ಎಂದು ಹೇಳಲಾಗಿತ್ತು. ಇದರಿಂದಾಗಿ ತಂಡಗಳ ಪ್ರಯಾಣಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗುವುದು ಎಂದು ಜಯ್ ಶಾ ತಿಳಿಸಿದ್ದರು.