ದುಬೈ:ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಬ್ರೆಂಡನ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿದ್ದಾರೆ. ಈ ಮೂಲಕ 17 ವರ್ಷಗಳ ವೃತ್ತಿ ಬದುಕಿಗೆ ಪೂರ್ಣವಿರಾಮ ನೀಡಿದ್ದಾರೆ.
ಐರ್ಲೆಂಡ್ ವಿರುದ್ಧ ಇಂದು ನಡೆದ ಮೂರನೇ ಏಕದಿನ ಪಂದ್ಯ ಅವರ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಇದರಲ್ಲಿ ಕೇವಲ 7ರನ್ಗಳಿಕೆ ಮಾಡಿದರು. 34 ವರ್ಷದ ಈ ಆಟಗಾರ 2004ರಲ್ಲಿ ತಂಡದ ಪರ ಪದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ 34 ಟೆಸ್ಟ್ ಪಂದ್ಯ, 204 ಏಕದಿನ ಹಾಗೂ 45 ಟಿ-20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 2320, 6677 ಹಾಗೂ 934ರನ್ಗಳಿಕೆ ಮಾಡಿದ್ದಾರೆ.
ಜಿಂಬಾಬ್ವೆ ಪರ ಟೆಸ್ಟ್ನಲ್ಲಿ ಅತಿ ಹೆಚ್ಚು ರನ್ಗಳಿಕೆ ಮಾಡಿರುವ ಪಟ್ಟಿಯಲ್ಲಿ ಟೇಲರ್ 4ನೇ ಸ್ಥಾನದಲ್ಲಿದ್ದು, ಏಕದಿನದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟು 17 ವರ್ಷಗಳ ಕಾಲದ ಕ್ರಿಕೆಟ್ ವೃತ್ತಿ ಬದುಕಿಗೆ ಟೇಲರ್ ವಿದಾಯ ಘೋಷಣೆ ಮಾಡಿದ್ದಾರೆ.
ಟ್ವೀಟ್ ಮೂಲಕ ವಿದಾಯ ಘೋಷಿಸಿರುವ ಬ್ರೆಂಡನ್ ಟೇಲರ್
17 ವರ್ಷಗಳ ವೃತ್ತಿ ಜೀವನಕ್ಕೆ ವಿದಾಯ ಘೋಷಣೆ ಮಾಡುತ್ತಿರುವ ಸುದ್ದಿಯನ್ನು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಟೇಲರ್ ಟ್ವೀಟ್ ಮಾಡುವ ಮೂಲಕ ಘೋಷಣೆ ಮಾಡಿದ್ದರು. ಕ್ರಿಕೆಟ್ ವೃತ್ತಿ ಜೀವನದಲ್ಲಿ ಅನೇಕ ಏರಿಳಿತ ಕಂಡಿದ್ದು, ಇಷ್ಟೊಂದು ವರ್ಷಗಳ ಕಾಲ ತಂಡ ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು, ನಿಜಕ್ಕೂ ನನ್ನ ಅದೃಷ್ಟ ಎಂದಿದ್ದಾರೆ.