ಹೌರಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಉದಯೋನ್ಮುಖ ಕ್ರಿಕೆಟಿಗ ರೋಹಿತ್ ಯಾದವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಂಗಾಳದ ಅಂಡರ್ 16 ತಂಡದ ಯುವ ಕ್ರಿಕೆಟಿಗರಾಗಿದ್ದ ರೋಹಿತ್ ಸಾವು ಕ್ರೀಡಾ ವಲಯದಲ್ಲಿ ಸಂಚಲನ ಮೂಡಿಸಿದೆ. ಕುಟುಂಬದಲ್ಲಿನ ಆರ್ಥಿಕ ಸಂಕಷ್ಟದ ನಡುವೆಯೂ ಕ್ರಿಕೆಟ್ನಲ್ಲಿ ಮುಂದುವರೆಯಲು ರೋಹಿತ್ ತಮ್ಮ ಸ್ನೇಹಿತರ ಬಳಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಹೌರಾದ ನಿವಾಸಿಯಾದ ರೋಹಿತ್ ಯಾದವ್ ಕೇವಲ 18 ವರ್ಷ ವಯಸ್ಸಿನವರಾಗಿದ್ದರು. ಬುಧವಾರ ಬೆಳಗ್ಗೆ ತಮ್ಮ ಮನೆಯ ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಗ ತಕ್ಷಣ ಪೋಷಕರು ರೋಹಿತ್ನನ್ನು ಸಮೀಪದ ಟಿಎ ಜೈಸ್ವಾಲ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟರಲ್ಲೇ ಮೃತಪಟ್ಟಿರುವುದಾಗಿ ಎಂದು ವೈದ್ಯರು ಘೋಷಿಸಿದ್ದಾರೆ. ನಂತರ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಬಂಗಾಳ ತಂಡದಲ್ಲಿ ಸ್ಥಾನ ಪಡೆದಿದ್ದ ಕ್ರಿಕೆಟಿಗ: ಉತ್ತಮ ಕ್ರಿಕೆಟ್ ಪಟುವಾಗಿದ್ದ ರೋಹಿತ್ ಬಂಗಾಳದ ಅಂಡರ್ 16 ತಂಡದಲ್ಲೂ ಸ್ಥಾನ ಪಡೆದಿದ್ದರು. ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಪ್ರಕಟಿಸಿದ್ದ 2019-20ರ ಸಾಲಿನ ಅಂಡರ್ 16 ತಂಡದ ಸಂಭವನೀಯ 35 ಜನ ಆಟಗಾರರಲ್ಲಿ ರೋಹಿತ್ ಮೊದಲ ಹನ್ನೊಂದರಲ್ಲಿ ತಮ್ಮ ಸ್ಥಾನ ಖಚಿತ ಪಡಿಸಿಕೊಂಡಿದ್ದರು.
ಕ್ರಿಕೆಟಿಗಾಗಿ ಸಾಲ ಮಾಡಿದ್ದ ರೋಹಿತ್:ಪ್ರತಿಭಾನ್ವಿತ ಕ್ರಿಕೆಟಿಗರಾಗಿದ್ದ ರೋಹಿತ್ ಯಾದವ್ ತಮ್ಮ ಕೆರಿಯರ್ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡಿದ್ದರು. ಆದರೆ, ಅವರ ಮನೆಯಲ್ಲಿ ಬಡವತವಿತ್ತು. ಇದರಿಂದ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಲು ಹಣದ ಸಮಸ್ಯೆ ಎದುರಿಸುತ್ತಿದ್ದರು. ಆದರೆ, ಹೇಗಾದರೂ ಮಾಡಿ ಕ್ರಿಕೆಟ್ನಲ್ಲಿ ಮುಂದುವರೆಯಬೇಕೆಂಬ ಛಲವನ್ನು ಹೊಂದಿದ್ದರು. ಹೀಗಾಗಿಯೇ ತಮ್ಮ ಕ್ರೀಡಾ ಸಾಮಗ್ರಿಗಳನ್ನು ಖರೀದಿಸುವ ನಿಟ್ಟಿನಲ್ಲಿ ಪರಿಚಯಸ್ಥರಿಂದ ರೋಹಿತ್ ಸಾಲ ಪಡೆದಿದ್ದರು ಎಂದು ಹೇಳಲಾಗುತ್ತಿದೆ.