ನವದೆಹಲಿ:ಉತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯವುಳ್ಳ ಯುವ ಕ್ರಿಕೆಟ್ ತಾರೆಗಳನ್ನು ಗುರುತಿಸಲು ಬಿಸಿಸಿಐ ಉತ್ಸುಕವಾಗಿದೆ. ಈ ಸಂಬಂಧ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಆಯ್ದ 20 ಆಲ್ರೌಂಡರ್ಗಳಿಗೆ ವಿಶೇಷ ಶಿಬಿರವನ್ನು ಹಮ್ಮಿಕೊಂಡಿದೆ. ಆಗಸ್ಟ್ನಲ್ಲಿ ಪ್ರಾರಂಭವಾಗಿ ಮೂರು ವಾರಗಳ ಕಾಲ ನಡೆಯಲಿರುವ ಶಿಬಿರದಲ್ಲಿ ಆಯ್ದ ಸುಮಾರು 20 ಆಲ್ರೌಂಡರ್ಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯಲಿರುವ ತರಬೇತಿ ಶಿಬಿರದಲ್ಲಿ ಖ್ಯಾತ ಕ್ರಿಕೆಟ್ ತಾರೆ ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಇರಲಿದ್ದಾರೆ. ಅರ್ಜುನ್ ತೆಂಡೂಲ್ಕರ್ ಗೋವಾ ಪರ ಕ್ರಿಕೆಟ್ ಆಡುತ್ತಿದ್ದು, ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದರು.
ಈ ಆಟಗಾರರ ಪಟ್ಟಿಯಲ್ಲಿ ಸೌರಾಷ್ಟ್ರ ತಂಡದ ಆಲ್ರೌಂಡರ್ ಚೇತನ್ ಸಕಾರಿಯಾ ಇದ್ದಾರೆ. ಇವರು ಈಗಾಗಲೇ 2021ರಲ್ಲಿ ಭಾರತದ ಪರ ಆಡಿದ್ದಾರೆ. ಅಲ್ಲದೇ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಪಂಜಾಬ್ ಎಡಗೈ ಬ್ಯಾಟರ್ ಮತ್ತು ಸ್ಪಿನ್ ಬೌಲರ್ ಅಭಿಷೇಕ್ ಶರ್ಮ ಕೂಡ ಇದ್ದು, ಇವರು ಸನ್ರೈಸರ್ಸ್ ಪರ ಆಡಿದ್ದರು. ಗೋವಾದ ಆಟಗಾರ ಮೋಹಿತ್ ರೆಡ್ಕರ್, ರಾಜಸ್ಥಾನದ ಮನವ್ ಸುತಾರ್, ಜೊತೆಗೆ ದೆಹಲಿಯ ವೇಗಿ ಹರ್ಷಿತ್ ರಾಣಾ, ಮಧ್ಯಮ ವೇಗಿ ದಿವಿಜ್ ಮೇಹ್ರಾ ಕೂಡ ಕ್ಯಾಂಪ್ನಲ್ಲಿರಲಿದ್ದಾರೆ.
ಇದನ್ನೂ ಓದಿ :ಭಾರತದ ಟೆಸ್ಟ್ ಕ್ರಿಕೆಟ್ ತಂಡ ಬದಲಾಗುತ್ತಾ? ಪ್ರಥಮ ದರ್ಜೆ ಪಂದ್ಯಗಳಲ್ಲಿ ಗಮನ ಸೆಳೆದ ಪ್ರತಿಭೆಗಳಿಗೆ ಸಿಗುವುದೇ ಅವಕಾಶ?