ಮೆಕಾಯ್(ಆಸ್ಟ್ರೇಲಿಯಾ): ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೈಫಲ್ಯ ಮರುಕಳಿಸಿದೆ. ಮೂರು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಮಿಥಾಲಿ ರಾಜ್ ತಂಡದೆದುರು ಶಕ್ತಿಶಾಲಿ ಪ್ರದರ್ಶನ ತೋರಿದ ಮೆಗ್ ಲ್ಯಾನಿಂಗ್ ನೇತೃತ್ವದ ಆಸೀಸ್ ಪಡೆ ಅಧಿಕಾರಯುತ ಗೆಲುವು ದಾಖಲಿಸಿತು. ಈ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆಯಿತು.
ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ಮಹಿಳಾ ತಂಡದ ಏಕದಿನ 25 ಏಕದಿನ ಪಂದ್ಯಗಳನ್ನು ಗೆದ್ದುಕೊಡು ಹೊಸ ದಾಖಲೆ ಬರೆದಿದೆ.
ಸೋಮವಾರದಿಂದ ಆರಂಭವಾಗಿರುವ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತ ಭಾರತವನ್ನು ಆಸೀಸ್ ತಂಡ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆಸೀಸ್ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಮಿಥಾಲಿ ಪಡೆ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಲಷ್ಟೇ ಶಕ್ತವಾಯಿತು.
ಪಂದ್ಯದಲ್ಲಿ ನಾಯಕಿ ಮಿಥಾಲಿ ರಾಜ್ 63 ರನ್ಗಳಿಸಿ ತಮ್ಮ 59ನೇ ಅರ್ಧಶತಕ ಪೂರೈಸಿದರು. ಆದರೆ ಇದಕ್ಕಾಗಿ ಅವರು ಬರೋಬ್ಬರಿ 107 ಎಸೆತಗಳನ್ನೇ ಎದುರಿಸಬೇಕಾಯ್ತು. ಇನ್ನು ಪದಾರ್ಪಣೆ ಆಟಗಾರ್ತಿ ಯಸ್ತಿಕಾ ಭಾಟಿಯಾ 35, ರಿಚಾ ಘೋಶ್ ಅಜೇಯ 32 ರನ್ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶ ಕಂಡರು.
ಆಸ್ಟ್ರೇಲಿಯಾ ಪರ ಡಾರ್ಸಿ ಬ್ರೌನ್ 33ಕ್ಕೆ 4 ವಿಕೆಟ್ ಪಡೆದರೆ, ಇನ್ನುಳಿದಂತೆ, ಮೊಲಿನೆಕ್ಸ್ 39ಕ್ಕೆ 2 ಮತ್ತು ಡಾರ್ಲಿಂಗ್ಟನ್ 29ಕ್ಕೆ 2 ವಿಕೆಟ್ ಪಡೆದರು.