ವೆಲ್ಲಿಂಗ್ಟನ್ :ಆರಂಭಿಕ ಆಟಗಾರ್ತಿಯರಾದ ಅಲಿಸ್ಸಾ ಹೀಲಿ(129) ಹಾಗೂ ರಾಚೆಲ್ ಹೇನ್ಸ್ (85) ಆಕರ್ಷಕ ಆಟದ ನೆರವಿನಿಂದ ವೆಸ್ಟ್ ಇಂಡೀಸ್ ಮಣಿಸಿದ ಆಸ್ಟ್ರೇಲಿಯಾವು ಮಹಿಳಾ ವಿಶ್ವಕಪ್ ಟೂರ್ನಿಯ ಫೈನಲ್ಗೆ ಲಗ್ಗೆ ಇಟ್ಟಿದೆ. ಇಲ್ಲಿನ ಬೇಸಿನ್ ರಿಸರ್ವ್ ಅಂಗಳದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ವಿಂಡೀಸ್ ವನಿತೆಯರನ್ನು ಕಾಂಗರೂ ಪಡೆ 157 ರನ್‌ಗಳಿಂದ ಸೋಲಿಸಿದೆ.
ಮಳೆಯಿಂದ ಪಂದ್ಯವು 5 ಓವರ್ಗಳ ಕಡಿತದೊಂದಿಗೆ ನಡೆಯಿತು. ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಆರಂಭದಿಂದಲೂ ಆರ್ಭಟಿಸಿದ ಅಲಿಸ್ಸಾ ಹೀಲಿ(129, 107 ಎಸೆತ) ಹಾಗೂ ರಾಚೆಲ್ ಹೇನ್ಸ್ (85) ಮೊದಲ ವಿಕೆಟ್ಗೆ 216 ರನ್ಗಳ ಭದ್ರ ಬುನಾದಿ ಹಾಕಿಕೊಟ್ಟರು. ಬಳಿ ಮೂನಿ (43) ಹಾಗೂ ಲ್ಯಾನ್ನಿಂಗ್(26) ಅಜೇಯ ಜೊತೆಯಾಟದ ಮೂಲಕ ಆಸೀಸ್ ವನಿತೆಯರು 45 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 305 ರನ್ಗಳ ಬೃಹತ್ ಮೊತ್ತ ಕಲೆ ಹಾಕಿದರು.
306 ರನ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. 12 ರನ್ಗೆ ರಶಾದಾ ವಿಲಿಯಮ್ಸ್(0) ರೂಪದಲ್ಲಿ ಮೊದಲ ವಿಕೆಟ್ ಪತನವಾಯಿತು. ಬಳಿಕ ಮತ್ತೋರ್ವ ಆರಂಭಿಕ ಆಟಗಾರ್ತಿ ಡಿಯಾಂಡ್ರಾ ಡಾಟಿನ್ (34), ನಾಯಕಿ ಸ್ಟೆಫನಿ ಟೇಲರ್ (48) ಹಾಗೂ ಹೇಲಿ ಮ್ಯಾಥ್ಯೂಸ್ (34) ಕೊಂಚ ಪ್ರತಿರೋಧ ಒಡ್ಡಿದರಾದರೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು.