ಬ್ರಿಸ್ಬೇನ್: ಆಸೀಸ್ ವೇಗಿಗಳ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ಗಳ ಸೋಲುಂಡಿದೆ. ಬೌಲರ್ಗಳ ಸ್ವರ್ಗದಂತಿದ್ದ ಗಬ್ಬಾ ಪಿಚ್ನಲ್ಲಿ ಎರಡೂ ಕಡೆಯ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು. ಎರಡೇ ದಿನದಲ್ಲಿ ಟೆಸ್ಟ್ ಪಂದ್ಯ ಅಂತ್ಯ ಕಂಡಿದೆ.
ಶನಿವಾರ ಟಾಸ್ ಸೋತು ಬ್ಯಾಟಿಂಗ್ಗಿಳಿದ ಹರಿಣಗಳ ತಂಡ, ಮಿಚೆಲ್ ಸ್ಟಾರ್ಕ್ ಹಾಗೂ ಇತರರ ಬೌಲಿಂಗ್ ದಾಳಿಗೆ ಸಿಲುಕಿ ಕೇವಲ 152 ರನ್ಗೆ ಆಲೌಟ್ ಆಗಿತ್ತು. 27ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಬೌಮಾ 38 ರನ್ ಹಾಗೂ ವಿಕೆಟ್ ಕೀಪರ್ ವೆರೆನ್ನೆ ಅರ್ಧಶತಕ(64)ದ ಕಾಣಿಕೆ ನೀಡಿದ್ದರು.
ಬಳಿಕ ಮೊದಲ ಇನ್ನಿಂಗ್ಸ್ ಆಡಿದ ಆಸ್ಟ್ರೇಲಿಯಾ ಕೂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. 27ಕ್ಕೆ 3 ವಿಕೆಟ್ ಪತನವಾಗಿದ್ದವು. ಆದರೆ ಬಳಿಕ ಸ್ಟಿವ್ ಸ್ಮಿತ್ 36 ಹಾಗೂ ಟ್ರಾವಿಸ್ ಹೆಡ್ ಬಿರುಸಿನ ಅರ್ಧಶತಕ(92) ಬಾರಿಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದ್ದರು. ಎರಡನೇ ದಿನ 218 ರನ್ಗೆ ಆಲೌಟ್ ಆದ ಆಸೀಸ್ 66 ರನ್ಗಳ ಅಮೂಲ್ಯ ಮುನ್ನಡೆ ಪಡೆಯಿತು.
66 ರನ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಮತ್ತೆ ವೈಫಲ್ಯ ಕಂಡಿತು. ನಾಯಕ ಡೀನ್ ಎಲ್ಗರ್(2) ಸೇರಿ ಪ್ರಮುಖ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. 5 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಬೌಮಾ 29 ಹಾಗೂ ಜೊಂಡೊ 36 ರನ್ ಗಳಿಸಿ ಕೊಂಚ ಚೇತರಿಕೆಯ ಭರವಸೆ ನೀಡಿದರೂ ಸಹ ಇವರಿಬ್ಬರ ವಿಕೆಟ್ ಪತನದ ಬಳಿಕ ಹರಿಣಗಳ ಇನ್ನಿಂಗ್ಸ್ಗೆ ಬಲ ಸಿಗಲಿಲ್ಲ. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ 5 ವಿಕೆಟ್ ಕಿತ್ತು ಹರಿಣಗಳನ್ನು 99 ರನ್ಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಎರಡನೇ ಇನ್ನಿಂಗ್ಸ್ನಲ್ಲಿ 35 ರನ್ಗಳ ಅಲ್ಪ ಗೆಲುವಿನ ಗುರಿ ಪಡೆದ ಆಸ್ಟ್ರೇಲಿಯಾ ಕೂಡ 4 ವಿಕೆಟ್ ಕಳೆದುಕೊಂಡಿತ್ತು. ಕಗೀಸೋ ರಬಾಡ 13 ರನ್ಗೆ 4 ವಿಕೆಟ್ ಉರುಳಿಸಿ ಭೀತಿ ಮೂಡಿಸಿದ್ದರು. ಅಂತಿಮವಾಗಿ ಆಸ್ಟ್ರೇಲಿಯಾ 7.5 ಓವರ್ಗಳಲ್ಲಿ ಗುರಿ ತಲುಪುವ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. 2ನೇ ಪಂದ್ಯವು ಡಿ. 25ರಿಂದ ಮೆಲ್ಬೋರ್ನ್ನಲ್ಲಿ ನಡೆಯಲಿದೆ.
ಇದನ್ನೂ ಓದಿ:ಚಿತ್ತಗಾಂಗ್ ಟೆಸ್ಟ್: ಬಾಂಗ್ಲಾ ವಿರುದ್ಧ ರಾಹುಲ್ ಪಡೆಗೆ 188 ರನ್ಗಳ ಜಯ