ನವದೆಹಲಿ: ಸಾಕಷ್ಟು ಕುತೂಹಲ ಕೆರಳಿಸಿದ್ದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಏಷ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ) ಅಂತಿಮವಾಗಿ ಇಂದು ದಿನಾಂಕ ನಿಗದಿ ಮಾಡಿದೆ. ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿದೆ. ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯಗಳು ನಡೆಯಲಿದ್ದು, ಉಳಿದ ಒಂಬತ್ತು ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಾಗುತ್ತದೆ ಎಂದು ಪ್ರಕಟಿಸಿದೆ.
ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಏಷ್ಯಾ ಕಪ್ ನಡೆಯಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳದ ತಂಡಗಳ ನಡುವೆ ಒಟ್ಟು 13 ಏಕದಿನ ಪಂದ್ಯಗಳು ಜರುಗಲಿವೆ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದ್ದು, ಟೂರ್ನಿಯು ಎರಡು ಗುಂಪುಗಳನ್ನು ಒಳಗೊಂಡಿರುತ್ತದೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್ ಫೋರ್ ಹಂತದಿಂದ ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ ಎಂದು ತಿಳಿಸಿದೆ. ಆದರೆ, ಪಂದ್ಯಗಳು ನಡೆಯುವ ಸ್ಥಳಗಳು ಮತ್ತು ದಿನಾಂಕಗಳನ್ನು ಎಸಿಸಿ ಇನ್ನೂ ಬಹಿರಂಗಪಡಿಸಿಲ್ಲ.
ಪಾಕ್ಗೆ ನಿರಾಸೆ?:50 ಓವರ್ಗಳ ಮಾದರಿಯ ಏಷ್ಯಾ ಕಪ್ ಸಂಪೂರ್ಣ ಟೂರ್ನಿಯು ಈ ಬಾರಿ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ, ಭದ್ರತಾ ಕಾರಣದಿಂದಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಬರುವುದಿಲ್ಲ. ಬರಬೇಕಾದರೆ ಕೇಂದ್ರ ಸರ್ಕಾರದ ಅನುಮತಿಬೇಕೆಂದು ಹೇಳಿ ನಿರಾಕರಿಸಿತ್ತು. ಇದರಿಂದ ಕಂಗೆಟ್ಟಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ನೆಲದಲ್ಲೇ ಟೂರ್ನಿಯ ಪಂದ್ಯಗಳು ನಡೆಯಬೇಕೆಂದು ಹೇಳಿ ಹೈಬ್ರಿಡ್ ಮಾದರಿ ಪ್ರಸ್ತಾವವನ್ನು ಮಂಡಿಸಿತ್ತು. ಅಂದರೆ, ಭಾರತ ಆಡಲಿರುವ ಆಡಲಿರುವ ಪಂದ್ಯಗಳನ್ನು ಬೇರೆಡೆ ಸ್ಥಳಾಂತರ ಮಾಡಿ, ಉಳಿದ ಪಂದ್ಯಗಳನ್ನು ತನ್ನಲ್ಲೇ ನಡೆಸಲು ಕೋರಿತ್ತು.