ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ಕ್ರೀಡೆ ಎಂದ ಮೇಲೆ ಸೋಲು ಗೆಲುವು ಸಾಮಾನ್ಯ. ಕ್ರೀಡಾಂಗಣದಲ್ಲಿ ಬದ್ಧ ವೈರಿಗಳಂತೆ ಕಂಡರೂ ಪಂದ್ಯದ ನಂತರ ಎಲ್ಲರೂ ಒಂದೇ. ಎಲ್ಲರನ್ನೂ ಸಮಾನವಾಗಿ ಕಂಡು ಗೌರವಿಸುವುದೇ ಕ್ರೀಡಾ ಸ್ಪೂರ್ತಿ. ನಿನ್ನೆ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ನಾಲ್ಕನೇ ಪಂದ್ಯದಲ್ಲಿ ಪಾಕ್ ಮತ್ತು ಭಾರತದ ವನಿತೆಯರು ಮುಖಾಮುಖಿಯಾಗಿದ್ದರು. ವುಮೆನ್ ಇನ್ ಬ್ಲೂ 7 ವಿಕೆಟ್ಗಳಿಂದ ಗೆಲುವು ಸಾಧಿಸಿತ್ತು.
ಪಂದ್ಯದ ನಂತರ ಉಭಯ ತಂಡಗಳು ಡ್ರೆಸ್ಸಿಂಗ್ ರೂಮ್ನಲ್ಲಿ ಒಂದಾಗಿದ್ದು, ತಮ್ಮ ಜರ್ಸಿಗಳನ್ನು ಬದಲಾಯಿಸಿಕೊಂಡು ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ. ಡ್ರೆಸ್ಸಿಂಗ್ ರೂಮ್ನಲ್ಲಿ ಗೆಲುವಿನ ಸಂತೋಷವನ್ನು ಹಂಚಿಕೊಂಡರು. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಟ್ವಿಟರ್ ಹ್ಯಾಂಡಲ್ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದೆ.
ಪಾಕಿಸ್ತಾನದ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ವಿಕೆಟ್ ಪತನದ ನಂತರ ಜೆಮಿಮಾ ರಾಡ್ರಿಗಸ್ ಮತ್ತು ರಿಚಾ ಘೋಷ್ ನಾಲ್ಕನೇ ವಿಕೆಟ್‌ಗೆ ಅಜೇಯ 58 ರನ್‌ಗಳ ಜೊತೆಯಾಟ ನಡೆಸಿದರು. ರೋಡ್ರಿಗಸ್ 38 ಎಸೆತಗಳಲ್ಲಿ ಅಜೇಯ 53 ರನ್ ಮತ್ತು ರಿಚಾ ಘೋಷ್ 20 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ ಭಾರತಕ್ಕೆ 150 ರನ್ ಗುರಿಯನ್ನು ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಸಾಧಿಸಿದರು.
ಉದಯೋನ್ಮುಖ ತಾರೆ ಜೆಮಿಮಾ ರಾಡ್ರಿಗಸ್ ಅವರ ಆಟವನ್ನು ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿಯ ಆಟಕ್ಕೆ ಹೋಲಿಸಲಾಗುತ್ತಿದೆ. ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಪುರುಷರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದವು. ಈ ವೇಳೆ, ಭಾರತ ಪ್ರಮುಖ ವಿಕೆಟ್ ಕಳೆದು ಕೊಂಡಾಗ ವಿರಾಟ್ ಕೊಹ್ಲಿ ಏಕಾಗಿಯಾಗಿ ನಿಂತು ಪಂದ್ಯ ಗೆಲ್ಲಿಸಿದ್ದರು.