ಅಹಮದಾಬಾದ್ (ಗುಜರಾತ್): ಮಹಾರಾಷ್ಟ್ರ ತಂಡವನ್ನು ಮಣಿಸಿ ಸೌರಾಷ್ಟ್ರ ತಂಡ ವಿಜಯ್ ಹಜಾರೆ ಟ್ರೋಫಿಗೆ ಮುತ್ತಿಕ್ಕಿದೆ. ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರದ ವಿರುದ್ಧ 5 ವಿಕೆಟ್ಗಳಿಂದ ಗೆದ್ದು ಸೌರಾಷ್ಟ್ರ ಎರಡನೇ ಬಾರಿಗೆ ವಿಜಯ್ ಹಜಾರೆ ಟೂರ್ನಿಯ ಚಾಂಪಿಯನ್ ಪಟ್ಟಕ್ಕೇರಿದೆ.
ಶುಕ್ರವಾರ ಅಹಮದಾಬಾದ್ನಲ್ಲಿ ನಡೆದ ಫೈನಲ್‌ನಲ್ಲಿ ಟಾಸ್ ಗೆದ್ದು ಸೌರಾಷ್ಟ್ರ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಸೌರಾಷ್ಟ್ರ ತಂಡ ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದುಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಮಹಾರಾಷ್ಟ್ರ ತಂಡ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿತ್ತು. ಉತ್ತಮ ಬ್ಯಾಟ್ ಬಿಸಿದ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಶತಕ ಸಿಡಿಸಿ ಮಿಂಚಿದರು. 131 ಎಸೆತಗಳನ್ನು ಎದುರಿಸಿದ ರುತುರಾಜ್ ಗಾಯಕ್ವಾಡ್ 108 ರನ್ಗಳನ್ನು ಬಾರಿಸುವ ಮೂಲಕ ತಂಡವು ಸವಾಲಿನ ಮೊತ್ತ ಕಲೆ ಹಾಕುವಲ್ಲಿ ನೆರವಾದರು.
ಚಿರಾಗ್ ಜಾನಿಗೆ ಹ್ಯಾಟ್ರಿಕ್ ವಿಕೆಟ್: ಉಳಿದಂತೆ ಸೌರಾಷ್ಟ್ರ ಬೌಲರ್ಗಳ ಬಿಗಿ ಬೌಲಿಂಗ್ಗೆ ಮಹಾರಾಷ್ಟ್ರದ ಆಟಗಾರರು ನಲುಗಿ ಹೋದರು. ಸತ್ಯಜೀತ್ ಬಚಾವ್ (27), ಅಂಕಿತ್ ಬಾವ್ನೆ (16), ಅಜೀಂ ಖಾಜಿ (37), ನೌಷಾದ್ ಶೇಖ್ (ಅಜೇಯ 31) ಹಾಗೂ ಸೌರಭ್ ನವಲೆ 13 ರನ್ಗಳನ್ನು ಗಳಿಸಲಷ್ಟೇ ಶಕ್ತರಾದರು. ಅಂತಿಮವಾಗಿ ಮಹಾರಾಷ್ಟ್ರ ತಂಡ 9 ವಿಕೆಟ್ಗಳನ್ನು ಕಳೆದುಕೊಂಡು 248 ರನ್ ಪೇರಿತು.
ಇತ್ತ, ಸೌರಾಷ್ಟ್ರ ಪರ ಆಲ್‌ರೌಂಡರ್ ಚಿರಾಗ್ ಜಾನಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು. ಅಲ್ಲದೇ, ಜಯದೇವ್ ಉನದ್ಕತ್, ಪ್ರೇರಕ್ ಮಂಕಡ್ ಹಾಗೂ ಪಾರ್ಥ್ ಭುತ್ ತಲಾ ಒಂದು ವಿಕೆಟ್ ಪಡೆದು ಮಹಾರಾಷ್ಟ್ರದ ಆಟಗಾರರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ಶೆಲ್ಡನ್ ಜಾಕ್ಸನ್ ಭರ್ಜರಿ ಶತಕ:ಮಹಾರಾಷ್ಟ್ರ ತಂಡ ನೀಡಿದ್ದ 249 ರನ್ಗಳ ಗೆಲುವಿನ ಗುರಿಯನ್ನು ಸೌರಾಷ್ಟ್ರ ತಂಡ 46.3 ಓವರ್ಗಳಲ್ಲೇ ತಲುಪಿತು. ಆರಂಭಿಕ ಆಟಗಾರರಾದ ಹರ್ವಿಕ್ ದೇಸಾಯಿ ಮತ್ತು ಶೆಲ್ಡನ್ ಜಾಕ್ಸನ್ ಮೊದಲ ವಿಕೆಟ್ಗೆ 125 ರನ್ಗಳ ಜೊತೆಯಾಟ ನೀಡಿದರು. ಹರ್ವಿಕ್ ದೇಸಾಯಿ 67 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 50 ರನ್ ಬಾರಿಸಿ ಔಟಾದರು.
ಶೆಲ್ಡನ್ ಜಾಕ್ಸನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಅಜೇಯ ಹಾಗೂ ಭರ್ಜರಿ ಶತಕ ಸಿಡಿಸಿದರು. 136 ಎಸೆತಗಳಲ್ಲಿ 12 ಬೌಂಡರಿ ಹಾಗೂ 5 ಸಿಕ್ಸರ್ಗಳೊಂದಿಗೆ 133 ರನ್ ಬಾರಿ ಮಿಂಚಿದರು. ಅಲ್ಲದೇ, ಬೌಲಿಂಗ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದ ಚಿರಾಗ್ ಜಾನಿ ಬ್ಯಾಟಿಂಗ್ನಲ್ಲೂ ಮಿಂಚಿದರು. 25 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ ಚಿರಾಗ್ ಜಾನಿ 30 ರನ್ ಕಲೆ ಹಾಕಿ ಅಜೇಯಯಾಗಿ ಉಳಿದರು.
ಈ ಮೂಲಕ 3.3 ಓವರ್ಗಳು ಬಾಕಿ ಇರುವಂತೆ ಸೌರಾಷ್ಟ್ರ ತಂಡ 5 ವಿಕೆಟ್ಗಳ ಮೂಲಕ ಭರ್ಜರಿ ಗೆಲುವು ದಾಖಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ಇನ್ನು, ಮಹಾರಾಷ್ಟ್ರ ಪರ ವಿಕಿ ಓಸ್ಟ್ವಾಲ್, ಮುಖೇಶ್ ಚೌಧರಿ ತಲಾ 2 ವಿಕೆಟ್ ಹಾಗೂ ಸತ್ಯಜೀತ್ ಬಚಾವ್ 1 ವಿಕೆಟ್ ಪಡೆದರು.
ಇದನ್ನೂ ಓದಿ:ಹಾಕಿ ಪುರುಷರ ವಿಶ್ವಕಪ್ 2023: ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ 21 ದಿನಗಳ ಕಾಲ ಟ್ರೋಫಿ ಯಾತ್ರೆ