ನವದೆಹಲಿ:ವಿಶ್ವ ಟೆಸ್ಟ್ ಚಾಂಪಿಯನ್ ಸೋತಿರುವ ಭಾರತ ಮುಂದಿನ ಡಬ್ಲ್ಯೂಟಿಸಿಗಾಗಿ ವೆಸ್ಟ್ ಇಂಡೀಸ್ ಸರಣಿ ಮೂಲಕವೇ ಶುಭಾರಂಭ ಮಾಡುವ ಹಾದಿಯಲ್ಲಿದೆ. ತಂಡದ ಹಿರಿಯ ಆಟಗಾರ ಚೇತೇಶ್ವರ್ ಪೂಜಾರಾರನ್ನು ಕೈಬಿಡಲಾಗಿದ್ದು, ಮೊಹಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. 5 ಯುವ ಬೌಲರ್ಗಳಿಗೆ ಸರಣಿಯಲ್ಲಿ ಸ್ಥಾನ ನೀಡಲಾಗಿದೆ. ಐವರಲ್ಲಿ ಆಡುವ 11 ರಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎಂಬುದು ಕುತೂಹಲವಾಗಿದೆ.
ಭಾರತ ತಂಡ ಜುಲೈ 12 ರಿಂದ ಆಗಸ್ಟ್ 13 ರವರೆಗೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ. ಜುಲೈ 12ರಿಂದ ಆರಂಭವಾಗಲಿರುವ ಪ್ರವಾಸದಲ್ಲಿ 2 ಟೆಸ್ಟ್ ಪಂದ್ಯಗಳ ಮೊದಲ ಸರಣಿ ನಡೆಯಲಿದೆ. ಬಿಸಿಸಿಐ ಟೆಸ್ಟ್ ಸರಣಿಗೆ 16 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ 5 ವೇಗದ ಬೌಲರ್‌ಗಳನ್ನು ಆಯ್ಕೆ ಮಾಡಲಾಗಿದೆ. ಯಾವ ವೇಗದ ಬೌಲರ್ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆದು ಮಿಂಚಲಿದ್ದಾನೆ ಎಂಬುದು ಕಾದು ನೋಡಬೇಕಿದೆ.
ಹಿರಿಯ ವೇಗಿ ಮೊಹಮದ್ ಶಮಿಗೆ ವೆಸ್ಟ್ ಇಂಡಿಸ್ ಸರಣಿಯಿಂದಲೇ ವಿಶ್ರಾಂತಿ ನೀಡಲಾಗಿದೆ. ಇದರಿಂದ ಯುವ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ ನೇತೃತ್ವ ವಹಿಸಲಿದ್ದಾರೆ. ಇನ್ನೊಬ್ಬ ವೇಗಿ ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್, ನವದೀಪ್ ಸೈನಿ ಮತ್ತು ಅನ್‌ಕ್ಯಾಪ್ಡ್ ಆಟಗಾರ ಮುಖೇಶ್ ಕುಮಾರ್ ಅವರು ಟೆಸ್ಟ್ ಸರಣಿಗಾಗಿ ಪ್ರಕಟಿಸಲಾದ 16 ಸದಸ್ಯರ ಭಾರತ ತಂಡದಲ್ಲಿ ಆಯ್ಕೆಯಾಗಿದ್ದಾರೆ.
6+2+3 ಸೂತ್ರ:ಇದಲ್ಲದೇ, ತಂಡದಲ್ಲಿ ಇಬ್ಬರು ಹಿರಿಯ ಸ್ಪಿನ್ನರ್‌ಗಳಾದ ಆರ್. ಅಶ್ವಿನ್, ರವೀಂದ್ರ ಜಡೇಜಾ, ಜೊತೆಗೆ ಅಕ್ಷರ್ ಪಟೇಲ್ ಕೂಡ ಇದ್ದಾರೆ. ಮೂವರು ವೇಗದ ಬೌಲರ್‌ಗಳೊಂದಿಗೆ ತಂಡ ಮೈದಾನಕ್ಕಿಳಿದರೆ, ಅನುಭವಿ ಆಟಗಾರ ಶಾರ್ದೂಲ್ ಠಾಕೂರ್‌ಗೆ ಪ್ಲೇಯಿಂಗ್11ನಲ್ಲಿ ಆದ್ಯತೆ ಸಿಗಲಿದೆ. ಉಳಿದ ಮೂವರು ಬೌಲರ್‌ಗಳಲ್ಲಿ ಜಯದೇವ್ ಉನದ್ಕತ್, ನವದೀಪ್ ಸೈನಿ ಮತ್ತು ಮುಖೇಶ್ ಕುಮಾರ್ರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ.