ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಐದೇ ದಿನ (ಏಪ್ರಿಲ್ 18) ಬಾಕಿ ಇದೆ. ಕಣದಲ್ಲಿರುವ ರಾಜಕೀಯ ಅಭ್ಯರ್ಥಿಗಳು ಕಾಲಿಗೆ ಚಕ್ರಕಟ್ಟಿಕೊಂಡಿರುವಂತೆ, ಕ್ಷೇತ್ರವೆಲ್ಲಾ ಸುತ್ತಾಡಿ ಬಿಡುವಿಲ್ಲದ ಪ್ರಚಾರ ನಡೆಸುತ್ತಿದ್ದಾರೆ.
ಈ ಬಾರಿ ಚುನಾವಣೆ ಘೋಷಣೆಯಾದಾಗಿನಿಂದಲೂ 'ಮಂಡ್ಯ ಕ್ಷೇತ್ರ' ಇಡೀ ದೇಶದ ಗಮನ ಸೆಳೆದಿದೆ. ದಿವಂಗತ ನಟ ಅಂಬರೀಶ್ ಅವರ ಪತ್ನಿ ಸುಮಲತಾ ಹಾಗೂ ಹಾಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕಣದಲ್ಲಿರುವುದೇ ಇದಕ್ಕೆ ಕಾರಣ. ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರೋ ಮಂಡ್ಯ ಕ್ಷೇತ್ರ ಇಡೀ ಇಂಡಿಯಾದಲ್ಲಿ ಸದ್ದು ಮಾಡ್ತಿದೆ.
ಕನ್ನಡ ಚಿತ್ರರಂಗದ ಮೇಲೆ ಎಲೆಕ್ಷನ್ ಎಫೆಕ್ಟ್!
ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ, ಜೆಡಿಎಸ್ ಹುರಿಯಾಳು ನಿಖಿಲ್ ಗೌಡ ಸಿನಿಮಾರಂಗದವರು. ಈ ಎಲೆಕ್ಷನ್ ಕನ್ನಡ ಚಿತ್ರರಂಗದ ಮೇಲೆ ಪ್ರಭಾವ ಬೀರುತ್ತೆ ಅಂತಾ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಚರ್ಚೆಯಾಗುತ್ತಿದೆ. ಕನ್ನಡ ಚಿತ್ರರಂಗದ ಬೆಳವಣಿಗೆಗೆ ಸರ್ಕಾರ ಕೊಡುಗೆ ಅವಶ್ಯ ವಾಗಿರುತ್ತೆ. ಆದ್ರೆ ಸುಮಲತಾ ಅಂಬರೀಶ್ ಸಿಎಂ ಪುತ್ರನ ವಿರುದ್ಧ ಸ್ಪರ್ಧಿಸಿದ್ದಾರೆ. ಇವರಿಗೆ ಚಿತ್ರರಂಗದ ಕೆಲವರು ಬಹಿರಂಗವಾಗಿ ಸಪೋರ್ಟ್ ಮಾಡ್ತಿದ್ದಾರೆ. ಪರಿಣಾಮ ಚಂದನವನದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
ರಣಕಣದಲ್ಲಿ ಸಿಎಂ ಹಾಗೂ ಅವರ ಮಗ ನಿಖಿಲ್ ಹೇಳಿಕೆಗಳಿಗೆ ದರ್ಶನ್ ಹಾಗೂ ಯಶ್ ಕೊಡುತ್ತಿರುವ ಪ್ರತ್ಯುತ್ತರಗಳು, ಕನ್ನಡ ಚಿತ್ರರಂಗದ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತೆ ಎನ್ನಲಾಗುತ್ತಿದೆ. ಯಾಕಂದ್ರೆ ಸದ್ಯ ರಾಜ್ಯದ ಮುಖ್ಯಮಂತ್ರಿಯಾಗಿರೋ ಕುಮಾರಸ್ವಾಮಿ ಚಿತ್ರರಂಗದ ಬೆಳವಣಿಗೆಗೆ ಪೂರಕವಾದಂತಹ ಜನತಾ ಟಾಕೀಸ್, ಮಲ್ಟಿಪ್ಲೆಕ್ಸ್ ದರ ಕಡಿತ, ಸಬ್ಸಿಡಿ ವಿಚಾರ ಹಾಗೂ ಮೈಸೂರಿನಲ್ಲಿ ಫಿಲ್ಮ್ ಯೂನಿವರ್ಸಿಟಿ ಮತ್ತು ರಾಮನಗರದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡುವುದಾಗಿ ಹೇಳಿದ್ರು. ಆದರೆ, ಈಗ ಚಿತ್ರರಂಗದ ಕೆಲವರು ಸಿಎಂ ಪುತ್ರನ ವಿರುದ್ಧ ಪ್ರಚಾರ ಮಾಡ್ತಿರೋದರಿಂದ ಸಿನಿಮಾ ಇಂಡಸ್ಟ್ರಿ ಸರ್ಕಾರ ಎದುರು ಹಾಕಿಕೊಂಡಂತಾಗಿದೆ ಎನ್ನಲಾಗುತ್ತಿದೆ.
ಒಂದು ವೇಳೆ ಕುಮಾರಸ್ವಾಮಿ ಸುಪುತ್ರ ನಿಖಿಲ್ ಮಂಡ್ಯದಲ್ಲಿ ಹಿನ್ನೆಡೆಯಾದರೆ, ಮೈತ್ರಿ ಸರ್ಕಾರ ಅಧಿಕಾರದಲ್ಲಿ ಮುಂದುವರೆದರೆ, ಕುಮಾರಸ್ವಾಮಿ ಖಂಡಿತವಾಗಿಯೂ ಕನ್ನಡ ಚಿತ್ರರಂಗ ಕಡೆಗಣಿಸಬಹದು ಎಂಬ ಮಾತುಗಳು ಕೇಳಿ ಬರುತ್ತಿವೆ.