ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಿಹಾರಿಕಾ ಧಾರಾವಾಹಿಯಲ್ಲಿ ನಿಹಾರಿಕಾ ಆಗಿ ನಟಿಸಿದ್ದ ಚೆಂದುಳ್ಳಿ ಚೆಲುವೆ ತೇಜಸ್ವಿನಿ ಪ್ರಕಾಶ್ ಇದೀಗ ಮತ್ತೆ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾದ ಹೊಚ್ಚ ಹೊಸ ಧಾರಾವಾಹಿ 'ನನ್ನರಸಿ ರಾಧೆ'ಯಲ್ಲಿ ಲಾವಣ್ಯ ಪಾತ್ರಕ್ಕೆ ಜೀವ ತುಂಬುವ ಮೂಲಕ ಮತ್ತೆ ಕಿರುತೆರೆಯಲ್ಲಿ ತಮ್ಮ ಬಣ್ಣದ ಬದುಕು ಆರಂಭಿಸಿದ್ದಾರೆ.
ಮತ್ತೆ ಕಿರುತೆರೆಗೆ ಕಾಲಿಟ್ಟ ಗಜ ಸಿನಿಮಾದ ಬೆಡಗಿ ತೇಜಸ್ವಿನಿ ವಿನು ಬಳಂಜ ನಿರ್ದೇಶನದಲ್ಲಿ ಮೂಡಿ ಬಂದ ನಿಹಾರಿಕಾ ಮೂಲಕ ಕಿರುತೆರೆಗೆ ಬಂದಿರುವ ತೇಜಸ್ವಿನಿ ಪ್ರಕಾಶ್ ಮೊದಲು ಕಾಲಿಟ್ಟಿದ್ದು ಬೆಳ್ಳಿತೆರೆಗೆ. ಮಸಣದ ಮಕ್ಕಳು ಸಿನಿಮಾದ ಮೂಲಕ ನಟನಾ ಪಯಣ ಶುರು ಮಾಡಿದ ತೇಜಸ್ವಿನಿ ಮೊದಲ ಸಿನಿಮಾದಲ್ಲಿಯೇ ಉತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ನಂತರ ಗಜ, ಈ ಪ್ರೀತಿ ಏಕೆ ಭೂಮಿ ಮೇಲಿದೆ, ಮಾತಾಡ್ ಮಾತಾಡ್ ಮಲ್ಲಿಗೆ, ಸವಿ ಸವಿ ನೆನಪು, ಬಂಧು ಬಳಗ, ಅರಮನೆ, ಜೊತೆಯಾಗಿ ಹಿತವಾಗಿ, ತರಂಗಿಣಿ, ಪ್ರೀತಿ ನೀ ಹಿಂಗೇಕೆ, ಕಿಲಾಡಿ ಕೃಷ್ಣ, ನಂದ ಗೋಕುಲ, ಕಲ್ಯಾಣಮಸ್ತು, ನಿತ್ಯ ಜೊತೆ ಸತ್ಯ, ಡಯಾನಾ ಹೌಸ್ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಗಜ ಸಿನಿಮಾದಲ್ಲಿ ಅಭಿನಯಿಸಿದ್ದ ತೇಜಸ್ವಿನಿ ಕಲರ್ಸ್ ಕನ್ನಡ ವಾಹಿನಿಯ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5ರ ಸ್ಫರ್ಧಿಯಾಗಿದ್ದ ತೇಜಸ್ವಿನಿ ನಿಹಾರಿಕಾಳಾಗಿ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ನಿಹಾರಿಕಾ ನಂತರ ಬಣ್ಣದ ಲೋಕದಿಂದ ಕೊಂಚ ದೂರವಿದ್ದ ತೇಜಸ್ವಿನಿ ಇದೀಗ ನನ್ನರಸಿ ರಾಧೆ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ.