ದಕ್ಷಿಣ ಭಾರತದ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಕೇವಲ ನಟನೆ ಮಾತ್ರವಲ್ಲ, ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದ ಕೂಡಾ ಹೆಸರಾದವರು. ಸರಳ ಸಜ್ಜನಿಕೆಯ ವ್ಯಕ್ತಿ ರಜನಿಕಾಂತ್. ಕ್ಯಾಮರಾ ಮುಂದೆ ಹೊರತುಪಡಿಸಿ ನಿಜಜೀವನದಲ್ಲಿ ಅವರು ಬಹಳ ಸರಳ ವ್ಯಕ್ತಿ.
ಖ್ಯಾತ ತಮಿಳು ನಿರ್ಮಾಪಕ ತಿರುಪೂರ್ ಸುಬ್ರಹ್ಮಣ್ಯಂ ಇದೀಗ ರಜನಿಕಾಂತ್ ಅವರ ಗುಣಗಾನ ಮಾಡಿದ್ದಾರೆ. ರಜನಿಕಾಂತ್ ದಾನ-ಧರ್ಮಗಳಿಗೆ ಕೂಡಾ ಹೆಸರಾಗಿದ್ದಾರೆ. ಸಂಭಾವನೆ ಪಡೆಯದೆ 'ವೇಲೈಕ್ಕಾರನ್' ಚಿತ್ರಕ್ಕೆ ಕಾಲ್ಶೀಟ್ ಕೊಟ್ಟ ದೊಡ್ಡ ನಟ ರಜನಿಕಾಂತ್. ಇದಾದ ನಂತರ ಕವಿತಾಲಯ ಪ್ರೊಡಕ್ಷನ್ಸ್ 100 ನೇ ಸಿನಿಮಾ 'ಶ್ರೀ ರಾಘವೇಂದ್ರರ್' ಚಿತ್ರದಲ್ಲಿ ಕೂಡಾ ಸಂಭಾವನೆ ಪಡೆಯದ ರಜನಿಕಾಂತ್ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರ ಮಾಡಿದ್ದರು. ಆದರೆ ಈ ಚಿತ್ರ ಗೆಲ್ಲಲಿಲ್ಲ. ಚಿತ್ರದಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಕೂಡಾ ನಟಿಸಿದ್ದರು.
'ಶ್ರೀ ರಾಘವೇಂದ್ರ' ಚಿತ್ರದಲ್ಲಿ ರಜನಿಕಾಂತ್ 'ಶ್ರೀ ರಾಘವೇಂದ್ರ' ಚಿತ್ರದ ನಂತರ ರಜನಿಕಾಂತ್ ಚೆನ್ನೈನಲ್ಲಿ ಸಾರ್ವಜನಿಕರಿಗಾಗಿ ರಾಘವೇಂದ್ರ ಕಲ್ಯಾಣ ಮಂಟಪವನ್ನು ನಿರ್ಮಿಸಿದರು. ನಂತರ ರಜನಿ ನಟಿಸಿದ 'ಬಾಬಾ' ಚಿತ್ರ ಕೂಡಾ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲಿಲ್ಲ. ಆಗ ರಜನಿಕಾಂತ್ ವಿತರಕರಿಗೆ ಹಣ ಹಿಂತಿರುಗಿಸಿದ್ದರು. ಕರ್ನಾಟಕದಲ್ಲಿ ಈ ಚಿತ್ರದ ಹಕ್ಕನ್ನು ಮಾಜಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಹೆಚ್.ಡಿ. ಗಂಗರಾಜು ಪಡೆದಿದ್ದರು. ವಿತರಣೆ ಹಣ ವಾಪಸ್ ಬಂದಾಗ ಮಾಧ್ಯಮಗೋಷ್ಠಿ ನಡೆಸಿದ ಗಂಗರಾಜು ಸೂಪರ್ ಸ್ಟಾರ್ಗೆ ಧನ್ಯವಾದ ಅರ್ಪಿಸಿದ್ದರು.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಿರ್ಮಾಪಕ ತಿರುಪೂರ್ ಸುಬ್ರಹ್ಮಣ್ಯಂ ರಜನಿ ಬಗ್ಗೆ ಮಾತನಾಡಿ ಅವರನ್ನು ಹೊಗಳಿದ್ದಾರೆ. ಒಟ್ಟಿನಲ್ಲಿ ನಿರ್ಮಾಪಕರಾಗಲೀ, ವಿತರಕರಾಗಲೀ ಸ್ವಲ್ಪವೂ ಕಷ್ಟ ಪಡಬಾರದು ಎಂಬುದು ರಜನಿಕಾಂತ್ ಅವರ ಉದ್ದೇಶ ಎಂಬುದು ಎಲ್ಲರಿಗೂ ತಿಳಿದ ವಿಚಾರ.