ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ನಟನೆ ಮೂಲಕ ಗುರುತಿಸಿಕೊಂಡಿದ್ದ ನಟ ಸಂಚಾರಿ ವಿಜಯ್ ಇದೀಗ ನೆನಪು ಮಾತ್ರ. ಕನ್ನಡ ಚಿತ್ರರಂಗದಲ್ಲಿ ಹತ್ತಾರು ವಿಶಿಷ್ಠ ಪಾತ್ರಗಳನ್ನು ಮಾಡಬೇಕಿದ್ದ ಸಂಚಾರಿ ವಿಜಯ್ ಜೂನ್ 15ರ ರಾತ್ರಿ ಬೈಕ್ ಅಪಘಾತಕ್ಕೆ ತುತ್ತಾಗಿ, ಇಹಲೋಕ ತ್ಯಜಿಸಿದರು. ಸಂಚಾರಿ ವಿಜಯ್ ಇಂದು ನಮ್ಮೊಂದಿಗಿದ್ದಿದ್ದರೆ 39ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದ್ರೆ ಅಪಘಾತಕ್ಕೀಡಾಗಿ ಹಲವು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ.
ಸಂಚಾರಿ ವಿಜಯ್ ಜನನ:
1983ರ ಜುಲೈ 17ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಹೋಬಳಿಯ ರಂಗಾಪುರ ಗ್ರಾಮದಲ್ಲಿ ಸಂಚಾರಿ ವಿಜಯ್ ಜನಿಸುತ್ತಾರೆ. ಸರಳ ವ್ಯಕ್ತಿತ್ವ ಹೊಂದಿದ್ದ ಸಂಚಾರಿ ವಿಜಯ್ ತಾವು ಅಂದುಕೊಂಡಂತೆ ನಿಜ ಜೀವನದಲ್ಲಿ ಸಾಧಿಸಿ ಹೋಗಿದ್ದಾರೆ. ಹೌದು, ಬಾಲ್ಯದಿಂದಲೂ ಸಿನಿಮಾ ನಟನಾಗುವ ಕನಸು ಕಂಡಿದ್ದ, ಸಂಚಾರಿ ವಿಜಯ್ ನಟನಾಗಿದ್ದು ಮಾತ್ರ ಇಂಟ್ರಸ್ಟಿಂಗ್.
ಬಾಲ್ಯದಿಂದಲೇ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ವಿಜಯ್:
ವಿಜಯ್ ಕುಮಾರ್ ಎಂಬದು ಸಂಚಾರಿ ವಿಜಯ್ ಅವ್ರ ಮೂಲ ಹೆಸರು. ಕಲೆ ಅನ್ನೋದು ರಕ್ತಗತವಾಗಿ ಬರುತ್ತೆ ಅನ್ನೋದಕ್ಕೆ ಪ್ರತ್ಯಕ್ಷ ಉದಾಹರಣೆ ಸಂಚಾರಿ ವಿಜಯ್. ತಂದೆ ಬಸವರಾಜಯ್ಯನವರು ಚಿತ್ರ ಕಲಾವಿದರು. ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಾಯಿ ಗೌರಮ್ಮನವರು, ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ರೇಡಿಯೋದಲ್ಲಿ ಅನೇಕ ಕಾರ್ಯಕ್ರಗಳನ್ನು ನೀಡಿದ್ದಾರೆ.
ಇಂತಹ ಕಲಾರಾಧಕರ ಕುಟುಂಬದಲ್ಲಿ ಜನಿಸಿದ ವಿಜಯ್ ಕುಮಾರ್ ಬಾಲ್ಯದಿಂದಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಶಿಕ್ಷಣ-ವೃತ್ತಿ:
ಪ್ರತಿಷ್ಠಿತ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ, ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ವಿಜಯ್ ಹಲವು ತಿಂಗಳುಗಳ ಕಾಲ ಕೆಲಸ ಮಾಡಿದ್ದಾರೆ. ಆದರೆ ವಿಜಯ್‌ಗೆ ಜೀವನದಲ್ಲಿ ಉಪನ್ಯಾಸಕ ವೃತ್ತಿ ಅಷ್ಟೊಂದು ತೃಪ್ತಿ ನೀಡಿರಲಿಲ್ಲ. ವಿಜಯ್ ಅವರನ್ನು ರಂಗಭೂಮಿ ಹಾಗು ಸಿನಿಮಾ ಕೈಬೀಸಿ ಕರೆಯುತ್ತಿತ್ತು.
ನಟನಾಗುವ ಕನಸು:
ಕಾಲೇಜ್ ಟೀಚಿಂಗ್ ಮಾಡುತ್ತಿದ್ದ ವಿಜಯ್ ಬಾಲ್ಯದಿಂದಲೂ ನಟನಾಗುವ ಕನಸು ಕಂಡಿದ್ದರು .ಅದರಂತೆ ವಿಜಯ್ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ತಮ್ಮ ಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಹತ್ತು ವರ್ಷಗಳಿಂದ ಸಂಚಾರಿ ವಿಜಯ್, ಥಿಯೇಟರ್‌ನಲ್ಲಿ ರಂಗತಂಡದ ಹಲವಾರು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಕನ್ನಡದ ಹಲವಾರು ರಂಗತಂಡಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲಿ ನಟನೆ ಮಾತ್ರವಲ್ಲದೇ, ಎರಡು ನಾಟಕಗಳನ್ನು ನಿರ್ದೇಶಿಸಿರೋದು ವಿಜಯ್ ಪ್ರತಿಭೆಗೆ ಸಾಕ್ಷಿ.