ಹೈದರಾಬಾದ್: ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ನಟಿ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡಿರುವ ಬಗ್ಗೆ ಮಾತನಾಡಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸಮಂತಾ, ತಾವು ತಮ್ಮ ಹೆಸರನ್ನು ಬದಲಿಸಿಕೊಂಡಿರುವ ಬಗ್ಗೆ ಮಾತ್ರ ಸಮರ್ಪಕ ಉತ್ತರ ನೀಡಿಲ್ಲ.
ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗ ಚೈತನ್ಯ ಅವರನ್ನು ಮದುವೆಯಾದ ಬಳಿಕ ತಮ್ಮ ಹೆಸರನ್ನು ಸಮಂತಾ ಅಕ್ಕಿನೇನಿ ಎಂದು ಬದಲಿಸಿಕೊಂಡಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಸಮಂತಾ ಅಕ್ಕಿನೇನಿ ಅಂತಲೇ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದರು.
ಇದ್ದಕ್ಕಿದ್ದಂತೆ ತಮ್ಮ ಸೋಷಿಯಲ್ ಮೀಡಿಯಾದ ಖಾತೆಗಳಾದ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ 'ಸಮಂತಾ' ಹಾಗೂ 'ಅಕ್ಕಿನೇನಿ' ಎರಡೂ ಹೆಸರುಗಳನ್ನು ತೆಗೆದು ಹಾಕಿ ಕೇವಲ 'S' ಎಂಬುದನ್ನು ಮಾತ್ರ ಅವರು ಉಳಿಸಿಕೊಂಡಿದ್ದಾರೆ. ರಾತ್ರೋರಾತ್ರಿಯ ಬದಲಾವಣೆಯು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ನಟಿ ಸಮಂತಾ ಹಾಗೂ ನಟ ನಾಗ ಚೈತನ್ಯ ನಡುವೆ ಬಿರುಕು ಬಿಟ್ಟಿದೆ ಎಂಬ ಗಾಳಿ ಸುದ್ದಿಯು ಹರಿದಾಡತೊಡಗಿತ್ತು.
ಇದಕ್ಕೆ ಕಾರಣ ಏನು ಎಂದು ನಟಿ ಸಮಂತಾ ಅವರನ್ನು ಕೇಳಿದಾಗ ಈ ಬಗ್ಗೆ ಸ್ಪಷ್ಟಪಡಿಸುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಫ್ಯಾಮಿಲಿ ಮ್ಯಾನ್ ವಿವಾದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ ಸಮಂತಾ, ನನ್ನ ಸುತ್ತಮುತ್ತಲಿನ ನೂರಾರು ಜನ ನೂರಾರು ರೀತಿ ಮಾತನಾಡುತ್ತಾರೆ. ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಇಂತಹ ಅಸಂಬಂಧ ವಿವಾದಗಳಿಗೆ ನಾನು ಉತ್ತರ ಸಹ ನೀಡುವುದಿಲ್ಲ ಎಂದಿದ್ದಾರೆ.
ಹೆಸರು ತೆಗೆದು ಹಾಕಿರುವ ಬಗ್ಗೆ ಅಭಿಮಾನಿಗಳಲ್ಲಿದ್ದ ಕುತೂಹಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರಾದರೂ ಸಮಂತಾ ಮಾತ್ರ ಇದಕ್ಕೆ ಯಾವುದೇ ಉತ್ತರ ನೀಡಿಲ್ಲ. ಆದರೆ, 'S' ಎಂಬುದು ಪತಿ ನಾಗ ಚೈತನ್ಯ ಅವರ ಎರಡನೇ ಹೆಸರು ಎಂದು ಹೇಳಲಾಗುತ್ತಿದ್ದು, ಅದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಈ ಬದಲಾವಣೆ ಮಾಡಿಕೊಂಡಿರಬಹುದು ಎನ್ನಲಾಗ್ತಿದೆ. ನಟಿ ಸಮಂತಾ ಬ್ಯಾಕ್ ಬ್ಯಾಕ್ ಟು ಹಿಟ್ ಸಿನಿಮಾ ಹಾಗೂ ಸಿರೀಸ್ ಕೊಡುವ ಮೂಲಕ ಸಾಕಷ್ಟು ಬ್ಯುಸಿಯಾಗಿದ್ದರು. ಕುಟುಂಬದೊಂದಿಗೆ ತಾವು ಕೆಲವು ದಿನಗಳ ಕಾಲ ಕಳೆಯಬೇಕು. ಹಾಗಾಗಿ ಸದ್ಯಕ್ಕೆ ಯಾವುದೇ ಚಿತ್ರೀಕರಣಕ್ಕೆ ಹೋಗುವುದಿಲ್ಲ. ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳನ್ನು ಮುಂದೂಡುವುದಾಗಿ ತಿಳಿಸಿದ್ದಾರೆ.