ನಟ, ನಿರ್ದೇಶಕ ರಿಷಬ್ ಶೆಟ್ಟಿ ಒಂದರ ಹಿಂದೆ ಒಂದು ಸಿನಿಮಾಗಳನ್ನು ಮಾಡುತ್ತ ಫುಲ್ ಬ್ಯುಸಿಯಾಗಿದ್ದಾರೆ. ಸದ್ಯ ಕಥಾ ಸಂಗಮ ಚಿತ್ರದಲ್ಲಿ ಬ್ಯುಸಿ ಇರುವ ಕಿರಿಕ್ ನಿರ್ದೇಶಕ ಬಿಡುವು ಮಾಡಿಕೊಂಡು ತಾವು ಬಾಲ್ಯದಲ್ಲಿ ವ್ಯಾಸಂಗ ಮಾಡಿದ ಶಾಲೆಗೆ ಭೇಟಿ ನೀಡಿ ಸಂಭ್ರಮಿಸಿದ್ದಾರೆ.
ಹೌದು ನಿರ್ದೇಶಕ ರಿಷಬ್ ಶೆಟ್ಟಿ ಕುಂದಾಪುರದ ಬೋರ್ಡ್ ಹೈ ಸ್ಕೂಲ್ಗೆ ಭೇಟಿ ನೀಡಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆ ಶಾಲೆಯ ಮಕ್ಕಳೊಂದಿಗೆ ಸೆಲ್ಫಿ ಕ್ಲಿಕ್ಕಸಿಕೊಂಡು ಸಾಮಾಜಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಕುಂದಾಪುರದ ಶಾಲೆಗೆ ಭೇಟಿ ನೀಡಿದ ಸಂಭ್ರಮವನ್ನು ಬರೆದುಕೊಂಡಿರುವ ರಿಷಬ್ ಶೆಟ್ಟಿ, ನನ್ನ ಪ್ರೈಮರಿ ಸ್ಕೂಲಿನ ಬೋರ್ಡು ಸಿನಿಮಾ ಆಯ್ತು. ಹಾಗೇಯೇ ಇಂದು ನಾನು ಓದಿದ್ದ ಕುಂದಾಪುರದ ‘ಬೋರ್ಡ್ ಹೈ ಸ್ಕೂಲ್’ಗೆ ಭೇಟಿ ನಿಡುವ ಅವಕಾಶ ಸಿಕ್ಕಿತು. ಎಸ್ಸೆಸ್ಸೆಲ್ಸಿ ತನಕ ಓದಿದ್ದ ಶಾಲೆಗೆ ಬಹಳ ವರ್ಷಗಳ ನಂತರ ಭೇಟಿ ನೀಡಿದ್ದು ಹಳೆಯ ನೆನಪುಗಳನ್ನೆಲ್ಲಾ ಹರಡಿಕೊಂಡು ಕೂರುವಂತಾಯ್ತು.
ಶಾಲೆ ಕಾಲಕ್ಕೆ ತಕ್ಕಂತೆ ಕೊಂಚ ಬದಲಾಗಿದ್ದರೂ ಇಲ್ಲಿನ ಕ್ಲಾಸ್ ರೂಂ, ಕೂರುತ್ತಿದ್ದ ಡೆಸ್ಕು, ಆಡಿ ಬೆಳೆದ ಮೈದಾನಗಳಿಗೆ ಇನ್ನೂ ನನ್ನ ಗುರುತಿದೆ ಎನ್ನಿಸಿತು. ಅದರಲ್ಲೂ ಅಗಾಧವಾದ ಪ್ರೀತಿ ತೋರಿಸಿದ ಇಲ್ಲಿನ ಮಕ್ಕಳ ಮುಗ್ಧ ನಗುವಿನಲ್ಲಿ, ತುಂಟತನದಲ್ಲಿ ಖಂಡಿತ ನಾನಿದ್ದೆ. ನನ್ನ ಬಾಲ್ಯದ ನೆನಪುಗಳಿದ್ದವು. ಬಾಲ್ಯಕ್ಕಂತೂ ಮರಳಲು ಸಾಧ್ಯವಿಲ್ಲ, ಆದರೆ ಬಾಲ್ಯದ ನೆನಪಗಳನ್ನಾದರೂ ಆಗಾಗ ಸವಿದು ಸಂತಸಪಡೋಣಾ ಎಂದು ಬರೆದುಕೊಂಡಿದ್ದಾರೆ.