ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತಮ್ಮ ಮನೋಜ್ಞ ನಟನೆಯ ಮೂಲಕ ಛಾಪು ಮೂಡಿಸಿದ್ದ ನಟ ಡಾ.ವಿಷ್ಣುವರ್ಧನ್. ಅಣ್ಣಾವ್ರ ನಂತರದ ಸ್ಥಾನದಲ್ಲಿ, ಇಂದಿಗೂ ಅಭಿಮಾನಿಗಳ ಮನಸ್ಸಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ವಿಷ್ಣುದಾದಾ. ಇಂತಹ ಮೇರುನಟನನ್ನು ತೆಲುಗು ಪೋಷಕ ನಟ ವಿಜಯ್ ರಂಗರಾಜು ಅವಾಚ್ಯ ಶಬ್ಧಗಳಿಂದ ನಿಂದಿಸಿ ಅಪಮಾನ ಮಾಡಿದ್ದಾರೆ.
ವಿಜಯ್ ರಂಗರಾಜು ಕ್ಷಮೆ ಯಾಚಿಸುವವರೆಗೂ ಬಿಡುವುದಿಲ್ಲ...ನಿರ್ದೇಶಕ ರವಿ ಶ್ರೀವತ್ಸ - Telugu actor Vijay Rangaraju
ಡಾ. ವಿಷ್ಣುವರ್ಧನ್ ಅವರಂತ ಮಹಾನ್ ನಟನ ಬಗ್ಗೆ ಇಲ್ಲಸಲ್ಲದ್ದನ್ನು ಮಾತನಾಡಿರುವ ತೆಲುಗು ನಟ ವಿಜಯ್ ರಂಗರಾಜು, ಡಾ. ವಿಷ್ಣು ಕುಟುಂಬಕ್ಕೆ ಕ್ಷಮೆ ಕೇಳಲೇಬೇಕು ಎಂದು ನಿರ್ದೇಶಕ ರವಿ ಶ್ರೀವತ್ಸ ಆಗ್ರಹಿಸಿದ್ದಾರೆ.
ವಿಜಯ್ ರಂಗರಾಜು ಡಾ. ವಿಷ್ಣುವರ್ಧನ್ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿ ಮೇಲೆ ಕ್ರಮ ಕೈಗೊಳ್ಳುವಂತೆ ವಿಷ್ಣು ಅಭಿಮಾನಿಗಳು ಫಿಲ್ಮ್ ಚೇಂಬರ್ ಮೊರೆ ಹೋಗಿದ್ದಾರೆ. ವಿಷ್ಣುವರ್ಧನ್ ನಟನೆಯಿಂದ ಮಾತ್ರವಲ್ಲದೆ, ತಮ್ಮ ವ್ಯಕ್ತಿತ್ವದಿಂದ ಕೂಡಾ ಇಂದಿಗೂ ಅನೇಕರಿಗೆ ಮಾದರಿಯಾಗಿದ್ದಾರೆ. ಆದರೆ ಅಂತ ನಟನ ಬಗ್ಗೆ ವಿಜಯ್ ರಂಗರಾಜು ಕೇವಲವಾಗಿ ಮಾತನಾಡಿರುವುದು ವಿಷ್ಣು ಅಭಿಮಾನಿಗಳನ್ನು ಕೆರಳಿಸಿದೆ. ಅನಿರುದ್ಧ್ ಕೂಡಾ ಮಾತನಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತೆಲುಗು ಚಿತ್ರರಂಗಕ್ಕೆ ಮನವಿ ಮಾಡಿದ್ದಾರೆ.
ನಿರ್ದೇಶಕ ರವಿ ಶ್ರೀವತ್ಸ ಕೂಡಾ ಮಾತನಾಡಿ "ನಮಗೆ ಅನ್ನ ಕೊಟ್ಟು ಸಾಕಿದ ದಣಿ ಡಾ. ವಿಷ್ಣುವರ್ಧನ್. ಆ ತೆಲುಗು ನಟನ ಮಾತುಗಳು ಬಹಳ ಬೇಸರ ತಂದಿದೆ. ಅಭಿಮಾನಿಗಳಾಗಿ ನಾವು ಯಾವ ರೀತಿ ಹೋರಾಟ ಮಾಡಬೇಕೋ ಮಾಡುತ್ತಿದ್ದೇವೆ. ಈಗಾಗಲೇ ಫಿಲ್ಮ್ ಚೇಂಬರ್‌ನಲ್ಲಿ ದೂರು ದಾಖಲಿಸಿದ್ದೇವೆ. ಆ ನಟ ಕ್ಷಮೆ ಯಾಚಿಸುವವರೆಗೂ ಬಿಡುವ ಮಾತಿಲ್ಲ. ಯಾವುದೇ ರಾಜ್ಯ ಆಗಲಿ ನಿಮ್ಮ ರಾಜ್ಯದ ಮೇರು ನಟರು ನಿಮಗೆ ಹೇಗೆ ಮುಖ್ಯವೋ ಡಾ. ವಿಷ್ಣುವರ್ಧನ್ ಅವರು ನಮಗೆ ಕೂಡಾ ಮುಖ್ಯ. ಕೂಡಲೇ ವಿಜಯ್ ರಂಗರಾಜು ಈ ಬಗ್ಗೆ ಕ್ಷಮೆ ಯಾಚಿಸಬೇಕು" ಎಂದು ಆಗ್ರಹಿಸಿದ್ದಾರೆ.