ಬೆಂಗಳೂರು:ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಹಾಗೂ ಐಎಸ್ಡಿ ಅಧಿಕಾರಿಗಳು ಚುರುಕಿನ ತನಿಖೆ ನಡೆಸುತ್ತಿದ್ದು ಪ್ರಕರಣದಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆ ಕೊಡಿಸಲು ಪಣ ತೊಟ್ಟಿದ್ದಾರೆ. 4-5 ದಿನಗಳಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ಕಲಾವಿದರನ್ನೂ ವಿಚಾರಣೆ ನಡೆಸಲಾಗುತ್ತಿದೆ.
ರವಿಶಂಕರ್ ಮಾಜಿ ಪತ್ನಿ ವಿಚಾರಣೆಯಿಂದ ರಾಗಿಣಿಗೆ ಮತ್ತಷ್ಟು ಕಂಟಕ...? - Ragini bail application hearing
ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ಮಾಜಿ ಪತ್ನಿಗೆ ಕೂಡಾ ಸಿಸಿಬಿ ಪೊಲೀಸರು ವಿಚಾರಣೆ ಹಾಜರಾಗಲು ಸೂಚಿಸಿದ್ದಾರೆ. ರವಿಶಂಕರ್ ಮಾಜಿ ಪತ್ನಿ ಅರ್ಚನಾ, ಪುತ್ರನೊಂದಿಗೆ ಪೂನಾದಲ್ಲಿ ನೆಲೆಸಿದ್ದು ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ.
ನಾಳೆ ರಾಗಿಣಿ ಹಾಗೂ ಸಂಜನಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ನಡುವೆ ರಾಗಿಣಿ ಆಪ್ತ ರವಿಶಂಕರ್ ಮಾಜಿ ಪತ್ನಿ ಅರ್ಚನಾಗೆ ಕೂಡಾ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ. ರಾಗಿಣಿ ಹಾಗೂ ರವಿಶಂಕರ್ ಇಬ್ಬರಿಗೂ ಪರಿಚಯವಾದ ನಂತರ ರವಿಶಂಕರ್ ಹೆಚ್ಚಾಗಿ ಪಾರ್ಟಿಗಳಿಗೆ ಹೋಗುತ್ತಿದ್ದರು. ಇದರಿಂದ ಅರ್ಚನಾ ಹಾಗೂ ರವಿಶಂಕರ್ ನಡುವೆ ವೈಮನಸ್ಸು ಹೆಚ್ಚಾಯ್ತು. ಈ ದಂಪತಿಗೆ 8 ವರ್ಷದ ಮಗ ಇದ್ದು ಪತಿಗೆ ಅರ್ಚನಾ ಸಾಕಷ್ಟು ಬಾರಿ ಬುದ್ಧಿ ಹೇಳಿದ್ದರು ಎನ್ನಲಾಗಿದೆ. ಆದರೆ ಪಾರ್ಟಿ ಗೀಳಿಗೆ ಬಿದ್ದ ರವಿಶಂಕರ್ ಪತ್ನಿ, ಪುತ್ರನನ್ನು ನಿರಾಕರಿಸಿ ಹೆಚ್ಚಾಗಿ ರಾಗಿಣಿ ಜೊತೆ ಪಾರ್ಟಿ ನೆಪ ಹೇಳಿಕೊಂಡು ಸುತ್ತಾಡುತ್ತಿದ್ದರು ಎನ್ನಲಾಗಿದೆ.
ಒಮ್ಮೆ ರವಿಶಂಕರ್ ತನ್ನ ಮನೆಗೆ ರಾಗಿಣಿಯನ್ನು ಕರೆತಂದು ಪತ್ನಿಗೆ ಪರಿಚಯ ಕೂಡಾ ಮಾಡಿಸಿದ್ದ ಎನ್ನಲಾಗಿದೆ. ಆದರೆ ದಿನ ಕಳೆದಂತೆ ರವಿಶಂಕರ್ ರಾಗಿಣಿಯೊಂದಿಗೆ ಹೆಚ್ಚು ತಿರುಗಾಡುತ್ತಿದ್ದರಿಂದ ಮನನೊಂದು 2018 ರಲ್ಲಿ ವಿಚ್ಛೇದನ ನೀಡಿ ಅರ್ಚನಾ ಮಗನೊಂದಿಗೆ ಪೂನಾಗೆ ತೆರಳಿ ನೆಲೆಸಿದ್ದರು. ಇದೀಗ ಅರ್ಚನಾಗೆ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು ಪೂನಾದಿಂದ ಅರ್ಚನಾ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.