ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾ ಹಂದರವುಳ್ಳ ಸಿನಿಮಾಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಅಂತಹದ್ದೇ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರಕ್ಕೆ ಕೃಷ್ಣನ ಗೀತೋಪದೇಶದಲ್ಲಿನ "ಕರ್ಮಣ್ಯೇ ವಾಧಿಕಾರಸ್ತೇ"ಯನ್ನು ಶಿರ್ಷಿಕೆಯಾಗಿ ಬಳಸಿಕೊಳ್ಳಲಾಗಿದೆ.
ಗೀತೋಪದೇಶದೊಂದಿಗೆ ತೆರೆಗೆ ಬರ್ತಿದೆ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ ಕರ್ಮಣ್ಯೇ ವಾಧಿಕಾರಸ್ತೇ - Karmanye Vadikarasthe Cinema
ಸ್ಯಾಂಡಲ್ವುಡ್ ಸಿನಿಮಾ ಕರ್ಮಣ್ಯೇ ವಾಧಿಕಾರಸ್ತೇ ತೆರೆ ಮೇಲೆ ಬರಲು ಸಜ್ಜಾಗಿದ್ದು, ಅದರ ಟೀಸರ್ ಇಂದು ಬಿಡುಗಡೆಯಾಗಿದೆ.
ಜಾಹೀರಾತುಗಳನ್ನ ನಿರ್ದೇಶನ ಮಾಡುತ್ತಿದ್ದ ಶ್ರೀಹರಿ ಈ ಚಿತ್ರ ನಿರ್ದೇಶಿಸಿದ್ದು, ಯುವನಟ ಪ್ರತೀಕ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ದಿವ್ಯ ಗೌಡ ಹಾಗೂ ಮಾಡೆಲ್ ಡೋಲಾಮ್ ಅವರು ನಟಿಯರಾಗಿ ಮಿಂಚಲಿದ್ದಾರೆ. ರಾಘವೇಂದ್ರ ಅವರು ಸಂಗೀತ ನಿರ್ದೇಶನ ಮಾಡಿದ್ದು, ಉದಯ್ ಲೀಲಾ ಛಾಯಾಗ್ರಹಣವಿದೆ. ಅಮೆರಿಕದಲ್ಲಿ ವೈದ್ಯರಾಗಿರುವ ರಮೇಶ್ ರಾಮಯ್ಯ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ಇಂಜಿನಿಯರಿಂಗ್ ಓದಿರುವ ಯುವ ನಟ ಪ್ರತೀಕ್ ಈ ಸಿನಿಮಾದಲ್ಲಿ ಮೂಢನಂಬಿಕೆಯನ್ನ ನಂಬುವ ವ್ಯಕ್ತಿಯ ಪಾತ್ರ ಮಾಡಿದ್ದಾರೆ. ಈಗಾಗಲೇ ಎರಡು ಚಿತ್ರದಲ್ಲಿ ನಟಿಸಿರುವ ದಿವ್ಯ ಗೌಡ ಡಾಕ್ಟರ್ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಇನ್ನು ಮಾಡೆಲ್ ಆಗಿರುವ ಡೋಲಾಮ್ ವಿಶಿಷ್ಟ ಪಾತ್ರದಲ್ಲಿ ಕಾಣ್ತಾರೆ. ಇದಲ್ಲದೆ ಉಗ್ರಂ ಮಂಜು ಸೇರಿದಂತೆ ಹಲವು ಜನ ಕಲಾವಿದರು ಕರ್ಮಣ್ಯೇ ವಾಧಿಕಾರಸ್ತೇ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಈ ಚಿತ್ರದ ಟೀಸರನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ನೋಡುಗರಿಗೆ ಕುತೂಹಲ ಮೂಡಿಸಿದೆ. ಇನ್ನು ಸಿನಿಮಾ ಸೆಪ್ಟಂಬರ್ ತಿಂಗಳಲ್ಲಿ ತೆರೆ ಮೇಲೆ ಬರುವ ಸಾಧ್ಯತೆಯಿದೆ.